ಬೆಂಗಳೂರು: ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ನಿನ್ನೆ 30 ಕಡೆ ದಾಳಿ ಮಾಡಿದ್ದ ತನಿಖಾಧಿಕಾರಿಗಳು ಇಂದು ಮತ್ತೆ ದಾಳಿಯನ್ನು ಮುಂದುವರೆಸಿದ್ದು, ದಾಳಿ ವೇಳೆ ಸಿಕ್ಕ ಕೆಲ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಗಲಭೆ ಪ್ರಕರಣದಲ್ಲಿ ಕೆಲ ಆರೋಪಿಗಳಿಗೆ ಭಯೋತ್ಪಾದಕ ಸಂಘಟನೆಗಳ ನಂಟು ಇರುವ ವಿಚಾರ ಈಗಾಗಲೇ ತನಿಖೆ ವೇಳೆ ಹೊರಬಂದಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಎನ್ ಐ ಎ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ತನಿಖಾ ತಂಡ ಇಂದು ಪ್ರಕರಣದ ಪ್ರಮುಖ ಆರೋಪಿಗಳ ಮನೆ ಪರಿಶೀಲನೆ ನಡೆಸಿದ್ದಾರೆ. ಕೆ.ಜಿ. ಹಳ್ಳಿಯ ಸೈಯದ್ ಸಾದಿಕ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಖಾಸಗಿ ಬ್ಯಾಂಕ್ ಗಳ ಸಾಲ ವಸೂಲಾತಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಸ್ಥಳೀಯವಾಗಿ ಎಸ್ ಡಿ ಪಿ ಐ ಸಂಘಟನೆ ಜೊತೆ ಗುರುತಿಸಿಕೊಂಡು ಪ್ರಮುಖ ಗಲಭೆಯಲ್ಲಿ ಪಾತ್ರವಹಿಸಿದ್ದ ಎನ್ನಲಾಗ್ತಿದೆ. ಹೀಗಾಗಿ ಈತನ ವಿಚಾರಣೆಯನ್ನು ಗೌಪ್ಯವಾಗಿ ನಡೆಸುತ್ತಿದ್ದಾರೆ.
ಹಾಗೆಯೇ ಇಂದು ಎಸ್ ಡಿ ಪಿ ಐ ಬೆಂಗಳೂರು ಘಟಕದ ಕಾರ್ಯದರ್ಶಿ ಸೈಯದ್ ಮುಜಾಮಿಲ್, ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ನಾಗವಾರ ವಾರ್ಡ್ ಖಲೀಂ ಪಾಷಾ, ಪುಲಿಕೇಶಿ ನಗರ ಕ್ಷೇತ್ರದ ಜೆ.ಡಿ.ಎಸ್ ಅಧ್ಯಕ್ಷ ವಾಜಿದ್ ಪಾಷಾ, ಬಿಬಿಎಂಪಿ ಮಾಜಿ ಮೆಯರ್ ಸಂಪತ್ ರಾಜ್ ಆಪ್ತ ಸಹಾಯಕ ಅರುಣ್, ಸಮೀವುದ್ದೀನ್, ಹಾಗೂ ಪೈರೋಜ್ ಪಾಷಾನ ಮನೆ ಬಳಿ ಕೂಡ ಕಾರ್ಯಾಚರಣೆ ಶುರು ಮಾಡಿದ್ದಾರೆಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಎನ್ ಐ ಎ ಅಧಿಕಾರಿಗಳು ಮಾಜಿ ಮೇಯರ್ ಸಂಪತ್ ರಾಜ್ ಮನೆಯಲ್ಲಿ ನಡೆದ ಶೋಧವನ್ನು ಗೌಪ್ಯವಾಗಿ ಇಟ್ಟಿದ್ದಾರೆ. ಸಂಪತ್ ರಾಜ್ಗೆ ಕೊರೊನಾ ಸೋಂಕು ತಗುಲಿದ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಸಿಬಿ ತನಿಖಾಧಿಕಾರಿಗಳು ನಡೆಸಿದ ತನಿಖೆ ಮೇರೆಗೆ ಎನ್ ಐ ಎ ಮಹತ್ವದ ಮಾಹಿತಿ ಕಲೆ ಹಾಕುತ್ತಿದೆ.