ಬೆಂಗಳೂರು : ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು, ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್ ಖಾನ್, ಮತ್ತು ರಿಜ್ವಾನ್ ಅರ್ಷದ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಗಲಭೆ ನಡೆದ ದಿನ ಪೊಲೀಸರ ಕೋರಿಕೆ ಮೇರೆಗೆ ಈ ಇಬ್ಬರು ಶಾಸಕರು ಸ್ಥಳಕ್ಕೆ ತೆರಳಿ, ನೆರೆದಿದ್ದ ಜನರಲ್ಲಿ ಶಾಂತಿಯಿಂದ ಇರುವಂತೆ ಮನವಿ ಮಾಡಿದ್ದರು. ಹೀಗಾಗಿ, ಗಲಭೆ ಸಂಬಂಧಿಸಿದಂತೆ ಸಪೂರ್ಣ ಮಾಹಿತಿಯನ್ನು ಎನ್ಐಎ ಅಧಿಕಾರಿಗಳು ಇಬ್ಬರು ಶಾಸಕರ ಮನೆಗೆ ತೆರಳಿ ಪಡೆದುಕೊಂಡಿದ್ದಾರೆ. ಎನ್ಐಎ ಪ್ರಕರಣ ಕೈಗೆತ್ತಿಕೊಂಡ ತಕ್ಷಣ ಗಲಭೆಗೆ ಸಾಕ್ಷಿಯಾದ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣೆಯ ಸುತ್ತಮುತ್ತ ಪರಿಶೀಲನೆ ನಡೆಸಿದೆ. ಜೊತೆಗೆ 18 ಮಂದಿ ತನಿಖಾಧಿಕಾರಿಗಳ ಹೇಳಿಕೆಯನ್ನು ಕೂಡ ದಾಖಲಿಸಿದೆ.
ಎನ್ಐಎ ವಿಚಾರಣೆ ಬಗ್ಗೆ ಮಾಹಿತಿ ನೀಡಿದ ಶಾಸಕ ರಿಜ್ವಾನ್ ಅರ್ಷದ್, ಎನ್ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಗಲಭೆ ನಡೆದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಮ್ಮನ್ನು ಸ್ಥಳಕ್ಕೆ ಕರೆಸಿಕೊಂಡಿದ್ದರು. ಹೀಗಾಗಿ, ಸ್ಥಳಕ್ಕೆ ತೆರಳಿ ಪೊಲೀಸರ ಜೊತೆ ಕೈ ಜೊಡಿಸಿದ್ದೆವು. ಹೀಗಾಗಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮುಂದೆ ವಿಚಾರಣೆ ನಡೆಸಿದರೆ ಸಹಕರಿಸುವುದಾಗಿ ತಿಳಿಸಿದ್ದಾರೆ.