ಬೆಂಗಳೂರು : ಡಿಜೆಹಳ್ಳಿ-ಕೆಜಿಹಳ್ಳಿ ಗಲಭೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ತಬ್ರೀಜ್ (35)ನನ್ನು ಬಂಧಿಸಲಾಗಿದೆ. ಎನ್ಐಎ ಹಾಗೂ ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಪತ್ತೆಯಾಗಿದ್ದ ಆರೋಪಿ ತಬ್ರೀಜ್‌ನನ್ನು ಅರೆಸ್ಟ್ ಮಾಡಿದ್ದಾರೆ.
ಈತ ಶೇಖ್ ಮಹಬೂಬ್ ಎಂಬುವರ ಮಗನಾಗಿದ್ದು, ಬೆಂಗಳೂರಿನ ನಿವಾಸಿಯಾಗಿದ್ದ. 2020ರ ಆಗಸ್ಟ್ 12ರಂದು ಡಿಜೆಹಳ್ಳಿ-ಕೆಜಿಹಳ್ಳಿ ಗಲಭೆ ನಡೆದಿತ್ತು. ವಾಟ್ಸ್‌ಆ್ಯಪ್ ಗ್ರೂಪ್ಗಳ ಮೂಲಕ ಗಲಭೆಗೆ ತಬ್ರೀಜ್ ಪ್ರಚೋದನೆ ನೀಡಿದ್ದಲ್ಲದೇ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದ್ದ ಎಂಬ ಆರೋಪ ಈತನ ಮೇಲಿದೆ.
ಬಳಿಕ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಎನ್ಐಎ, 109 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಇದರಲ್ಲಿ ಓಲ್ಡ್ ಬೆಂಗಳೂರು ಲೇಔಟಿನ ನಿವಾಸಿಯಾಗಿದ್ದ ಆರೋಪಿ ತಬ್ರೀಜ್ ಹೆಸರು ಇದ್ದು, ಈತ ಸಗಾಯ್ ಪುರಂ ವಾರ್ಡಿನ ಎಸ್‌ಡಿಪಿಐ ಕಾರ್ಯಕರ್ತನಾಗಿದ್ದ.
ಘಟನೆಯ ಹಿನ್ನೆಲೆ : 2020ರ ಆಗಸ್ಟ್ 11ರಂದು ಬೆಂಗಳೂರಿನ ಡಿಜೆಹಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿತ್ತು. ಈ ಘಟನೆಯ ಎಫ್‌ಐಆರ್‌ನಲ್ಲಿ ತಬ್ರೇಜ್‌ನನ್ನ ಪ್ರಮುಖ ಆರೋಪಿ ಎಂದು ಗುರ್ತಿಸಲಾಗಿತ್ತು. ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಸೇರಿ ಹಲವು ಪ್ರಕರಣಗಳನ್ನು ಈತನ ವಿರುದ್ಧ ದಾಖಲಿಸಲಾಗಿತ್ತು.
2020ರ ಆಗಸ್ಟ್ 11ರಂದು ರಾತ್ರಿ ಡಿಜೆಹಳ್ಳಿ ಪೊಲೀಸ್ ಠಾಣೆ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ಮಾಡಿತ್ತು. ನವೀನ್ ಎಂಬಾತ ಪ್ರವಾದಿ ಮೊಹಮ್ಮದರ ಕುರಿತಾಗಿ ಅವಹೇಳನಕಾರಿ ಪೋಸ್ಟ್ ಒಂದನ್ನು ಹಾಕಿದ್ದ ಎಂದು ಆರೋಪಿಸಿದ್ದ ಗುಂಪು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿತ್ತು. ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರಿಂದ ಗಲಭೆಗೆ ಕಾರಣವಾಗಿತ್ತು.
ಪೊಲೀಸ್ ಠಾಣೆ ಮೇಲೆ ಕಲ್ಲೆಸೆತ, ಪೊಲೀಸ್ ವಾಹನಗಳಿಗೆ ಬೆಂಕಿ ಹಾಕಿದ್ದು ಸೇರಿದಂತೆ ಹಲವು ವಿಧ್ವಂಸಕ ಕೃತ್ಯಗಳನ್ನು ಈ ಗುಂಪು ಎಸಗಿತ್ತು. ಈ ಪ್ರಕರಣ ಸಂಬಂಧ 2020 ಸೆಪ್ಟೆಂಬರ್ 21ರಂದು ಎನ್‌ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುರಿಸಿತ್ತು.
ಬೆಂಗಳೂರು ಸಿಟಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆ.143,147, 307, 436, 353, 332, 333, ಅಡಿ ಹಾಗೂ ಘಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದ್ದ ಹಿನ್ನೆಲೆ 1984 ಹಾಗೂ 1981ರ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಸಮಗ್ರ ತನಿಖೆ ನಡೆಸಿದ ಬಳಿಕ 109 ಆರೋಪಿಗಳ ವಿರುದ್ಧ 5.2.2021ರಂದು ರಾಷ್ಟ್ರೀಯ ತನಿಖಾ ದಳ ಚಾರ್ಜ್‌ಶೀಟ್ ಸಲ್ಲಿಸಿತ್ತು.