ಬೆಂಗಳೂರು: ಪರಿಸರ ಸಂರಕ್ಷಣೆ ಕಾಯ್ದೆ ರೂಪಿಸುವಾಗ ಸಂಸತ್ತು ವಿದೇಶಿ ಪ್ರಭಾವಕ್ಕೆ ಒಳಗಾಗಿತ್ತು ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 5 ಲಕ್ಷ ರೂಪಾಯಿ ದಂಡ ಪಾವತಿಸುವುದಾಗಿ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಈ ಕುರಿತ ಅರ್ಜಿ ವಿಚಾರಣೆ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ಹಿರಿಯ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ನ್ಯಾಯಾಲಯದ ಸೂಚನೆಯಂತೆ 5 ಲಕ್ಷ ರೂ. ದಂಡ ಪಾವತಿಸಲು ಪ್ರಾಧಿಕಾರ ಸಿದ್ಧವಿದೆ. ಈ ಹಣವನ್ನು ದೇಣಿಗೆಯಾಗಿ ಡೆಹ್ರಾಡೂನ್‌ನಲ್ಲಿರುವ ರಾಷ್ಟ್ರೀಯ ಅರಣ್ಯ ಸಂಶೋಧನಾ ಸಂಸ್ಥೆ ಮತ್ತು ವನ್ಯಜೀವಿ ಸಂಶೋಧನಾ ಸಂಸ್ಥೆಗೆ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು. ಇದಕ್ಕೆ ಸಮ್ಮತಿಸಿದ ಪೀಠ, ಎರಡೂ ಸಂಸ್ಥೆಗಳಿಗೆ ತಲಾ 2.50 ಲಕ್ಷ ರೂ. ನೀಡುವಂತೆ ಸಲಹೆ ನೀಡಿತು. ದೇಣಿಗೆ ಪಾವತಿಸಿ, ಈ ಕುರಿತ ರಶೀದಿಗಳನ್ನು ಸಲ್ಲಿಸಿದ ಬಳಿಕ ಆಕ್ಷೇಪಣೆ ಹಿಂಪಡೆಯುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿತು.
ಓದಿ : ಕೆರೆಗಳ ಸಂರಕ್ಷಣೆ: ನೀರಿ ಶಿಫಾರಸು ಆಕ್ಷೇಪಿಸಿದ ಅರ್ಜಿದಾರರ ನಡೆಗೆ ಹೈಕೋರ್ಟ್ ಬೇಸರ
100 ಕಿ.ಮೀ.ವರೆಗಿನ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಪರಿಸರ ಪರಿಣಾಮ ಅಧ್ಯಯನ (ಇಐಎ) ಅನ್ವಯಿಸದಿರಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಯುನೈಟೆಡ್ ಕನ್ಸರ್ವೇಷನ್ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಎನ್ಹೆಚ್ಎಐ ಹಿರಿಯ ಅಧಿಕಾರಿಯೊಬ್ಬರು, ಪರಿಸರ ಸಂರಕ್ಷಣೆ ಕಾಯ್ದೆ ರೂಪಿಸುವುದರ ಹಿಂದೆ ವಿದೇಶಿ ಕೈವಾಡ ಇದೆ ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ಇಂತಹ ಹೇಳಿಕೆ ಹಿಂದಿನ ಉದ್ದೇಶವನ್ನು ತನಿಖೆ ಮಾಡಿ ಅಧಿಕಾರಿ ವಿರುದ್ಧ ಕ್ರಮ ಜರುಗಿಸಿದ ವರದಿ ನೀಡುವಂತೆ ಎನ್ಹೆಚ್ಐಎ ಅಧ್ಯಕ್ಷರಿಗೆ ನಿರ್ದೇಶಿಸಿತ್ತು. ಆ ಬಳಿಕ ಪ್ರಾಧಿಕಾರ ನೀಡಿದ ಯಾವುದೇ ಸಮಜಾಯಿಸಿ ಒಪ್ಪದ ಪೀಠ, ದಂಡ ವಿಧಿಸುವುದಾಗಿ ಸ್ಪಷ್ಟಪಡಿಸಿತ್ತು. ಇದೇ ವೇಳೆ ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗೆ ದಂಡದ ಹಣವನ್ನು ದೇಣಿಗೆ ರೂಪದಲ್ಲಿ ಪಾವತಿಸಲು ಸೂಚಿಸಿತ್ತು. ಅದರಂತೆ ಪ್ರಾಧಿಕಾರ ಇದೀಗ 5 ಲಕ್ಷ ರೂ. ದಂಡ ಪಾವತಿಸಲು ಒಪ್ಪಿಗೆ ನೀಡಿದ್ದು, ಈ ಹಣವನ್ನು ಸಂಶೋಧನಾ ಸಂಸ್ಥೆಗಳಿಗೆ ದೇಣಿಗೆಯಾಗಿ ಪಾವತಿಸುವುದಾಗಿ ಭರವಸೆ ನೀಡಿದೆ.