ಬೆಂಗಳೂರು: ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಕರ್ನಾಟಕ ರಾಜ್ಯ ಸಮಿತಿ ರಚಿಸಿ, ನಿವೃತ್ತ ನ್ಯಾಧೀಶರಾದ ಸುಭಾಷ್ ಆದಿಯವರನ್ನು ಅಧ್ಯಕ್ಷರನ್ನಾಗಿ ಮಾಡಿ ಎರಡು ತಿಂಗಳು ಕಳೆದಿವೆ. ಈವರೆಗೆ ಚುನಾವಣೆ ಹಿಂದೆ ಬಿದ್ದು, ಬೇರೆಲ್ಲಾ ಕೆಲಸಗಳನ್ನು ಮೂಲೆಗುಂಪು ಮಾಡಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಂದೆಡೆ ಕೂರಿಸಿ ಘನತ್ಯಾಜ್ಯ ನಿರ್ವಹಣೆಯ ಪಾಠ ಮಾಡಲು ಮುಂದಾಗಿದ್ದಾರೆ.
ಈ ಹಿಂದೆ ತಮಿಳುನಾಡಲ್ಲಿದ್ದ ರೀಜನಲ್ ಮಾನಿಟರಿಂಗ್ ಕಮಿಟಿ ನಾಲ್ಕೈದು ರಾಜ್ಯಗಳನ್ನು ಪರಿಶೀಲಿಸುತ್ತಿತ್ತು. ಆದರೆ ಇದೀಗ ಪ್ರತೀ ರಾಜ್ಯಕ್ಕೊಬ್ಬರು ನಿವೃತ್ತ ನ್ಯಾಯಮೂರ್ತಿಯವರನ್ನು ನೇಮಿಸಿದ್ದು, ಕರ್ನಾಟಕಕ್ಕೆ ಸುಭಾಷ್ ಆದಿಯವರನ್ನು ನೇಮಿಸಲಾಗಿದ್ದು, ಅವರು ನಡೆಸುತ್ತಿರುವ ಮೊದಲ ಸಭೆ ಇದಾಗಿದೆ.
ಈ ಹಿಂದೆ ಅಧಿಕಾರ ವಹಿಸಿಕೊಂಡ ಒಂದು ತಿಂಗಳೊಳಗೆ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳೊಂದಿಗೆ ಮಿಟಗಾನಹಳ್ಳಿ, ಬಾಗಲೂರು, ಬೆಳ್ಳಳ್ಳಿ ಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ಕ್ವಾರಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೋಗುತ್ತಿರೋದು ಕಂಡು ಅಸಮಾಧಾನಗೊಂಡಿದ್ದರು. ಅಲ್ಲದೆ ಪಾಲಿಕೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದು, ತ್ಯಾಜ್ಯ ವಿಂಗಡಣೆಗೆ ಹೆಚ್ಚಿನ ಒತ್ತು ನೀಡುವಂತೆ ಕಿವಿ ಹಿಂಡಿದ್ದರು.
ಹೀಗಾಗಿ ಕಸ ಸಮಸ್ಯೆ ನಿವಾರಣೆ ಕೇವಲ ಅಧಿಕಾರಿಗಳ ಜವಾಬ್ದಾರಿ ಎಂದುಕೊಂಡಿದ್ದ ಪಾಲಿಕೆ ಸದಸ್ಯರು, ಶಾಸಕರಿಗೂ ಹಾಗೂ ಬೇಜವಾಬ್ದಾರಿಯಿಂದ ಇರುತ್ತಿದ್ದ ಅಧಿಕಾರಿಗಳು, ಗುತ್ತಿಗೆದಾರರಿಗೂ ನಾಳೆ ಸಭೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ.