ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಈಗ ಬಹುತೇಕ ಎಲ್ಲಾ ಹಿರಿಯ ಹಾಗೂ ಜನಪ್ರಿಯ ನಾಯಕರು ಸಿಎಂ ಸ್ಥಾನದ ಆಕಾಂಕ್ಷಿಗಳೇ ಆಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವ ಮುನ್ನವೇ ಇಂತಹ ಹೇಳಿಕೆ ನೀಡುವ ಮೂಲಕ ಅನ್ಯಾಯವಾಗಿ ಸಂಘಟನೆಗೆ ಹೊಡೆತ ಬೀಳುವಂತೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.
ಕಾಂಗ್ರೆಸ್ ಪಕ್ಷ ಅದರಲ್ಲೂ ಮೂಲ ಕಾಂಗ್ರೆಸಿಗರು ಅಧಿಕಾರದಿಂದ ದೂರವಿದ್ದು ವರ್ಷಗಳೇ ಕಳೆದು ಹೋಗಿವೆ. 1999 ರಿಂದ 2004ರವರೆಗೆ ಎಸ್.ಎಂ. ಕೃಷ್ಣ ಸಿಎಂ ಆಗಿದ್ದರು. ಅದಾದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಅಧಿಕಾರ ಸಿಗಲಿಲ್ಲ, ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿದಾಗ ಎನ್.ಧರ್ಮಸಿಂಗ್ ಸಿಎಂ ಆಗಿ 2004 ರಿಂದ 2006ರವರೆಗೆ ಮಾತ್ರ ಅಧಿಕಾರ ನಡೆಸಿದ್ದರು.
ಇದಾಗಿ ನಂತರ ಕಾಂಗ್ರೆಸ್ಗೆ ಅಧಿಕಾರ ಅನುಭವಿಸುವ ಅವಕಾಶ ಸಿಕ್ಕಿದ್ದು, 2013 ರಿಂದ 2018ರ ಅವಧಿ. ಆಗ ಜೆಡಿಎಸ್ನಿಂದ ವಲಸೆ ಬಂದ ಸಿದ್ದರಾಮಯ್ಯ ಸಿಎಂ ಆದರು. ಆದ್ದರಿಂದ 2006 ರಿಂದಲೂ ಮೂಲ ಕಾಂಗ್ರೆಸಿಗರ ಕೈಗೆ ಅಧಿಕಾರದ ಚುಕ್ಕಾಣಿ ಸಿಕ್ಕಿಲ್ಲ.
ಹೀಗಿರುವಾಗ, ಮುಂದಿನ ಸಿಎಂ ವಿಚಾರವಾಗಿ ಚರ್ಚೆ ಆರಂಭವಾಗಿದ್ದು, ಮತ್ತೆ ಸಿದ್ದರಾಮಯ್ಯ ಹೆಸರನ್ನು ಕೆಲ ಶಾಸಕರು ಕೂಗುತ್ತಿದ್ದಾರೆ. ಇದು ಮೂಲ ಕಾಂಗ್ರೆಸ್ ನಾಯಕರಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಒಂದು ವರ್ಷದಿಂದ ಗಂಭೀರವಾಗಿ ನಡೆಯುತ್ತಿದ್ದ ಪಕ್ಷ ಸಂಘಟನೆಗೆ ಈ ಕೂಗು ಹೊಡೆತ ಕೊಟ್ಟಿದೆ.
ಓದಿ : ಸಿದ್ದರಾಮಯ್ಯ ಅಲೆ ಅಡಗಿಸಲು ಮೂಲ ಕಾಂಗ್ರೆಸಿಗರ ಹೊಸ ತಂತ್ರ: "ದಲಿತ ಸಿಎಂ ಅಲೆ"
ಮುಂದಿನ ಸಿಎಂ ವಿಚಾರವಾಗಿ ಎದ್ದಿರುವ ಕೂಗು ಕಾಂಗ್ರೆಸ್ನ ಅಧಿಕಾರ ದಾಹ ತೋರಿಸುತ್ತಿದೆ. ಇವರಿಗೆ ಅಧಿಕಾರಕ್ಕೆ ಬರುವ ಮುನ್ನವೇ ಆಸೆ ಹೆಚ್ಚಾಗಿದೆ ಎಂಬ ಮಾತುಗಳು ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿವೆ. ಇದು ಪಕ್ಷ ಸಂಘಟನೆಗೆ ದೊಡ್ಡ ಹೊಡೆತ ಕೊಡುವ ಸಾಧ್ಯತೆ ತೋರಿಸುತ್ತಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಒಂದಿಷ್ಟು ಕಾರ್ಯ ಪೂರೈಸಿ, ಪಕ್ಷ ಸಂಘಟನೆ, ಪುನರ್ ರಚನೆ, ಹೊಸ ಸಮಿತಿಗಳ ನೇಮಕ ಇತ್ಯಾದಿಗಳತ್ತ ಗಮನ ಹರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಹೊಸ ಕೂಗು ತಡೆಯಾಗುವ ಸಾಧ್ಯತೆಯಿದೆ. ರಾಜ್ಯ ನಾಯಕರೇ ಪದವಿಗಾಗಿ ಎರಡು ವರ್ಷ ಮುನ್ನವೇ ಕಿತ್ತಾಡಲು ಆರಂಭಿಸಿದ್ದು, ಕಾರ್ಯಕರ್ತರ ದೃಷ್ಟಿಯಲ್ಲಿ ನಾಯಕತ್ವವನ್ನೇ ಕೀಳಾಗಿ ಕಾಣುವ ಸ್ಥಿತಿ ನಿರ್ಮಾಣ ಮಾಡುವ ಆತಂಕ ಎದುರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಲ್ಲದೆ, ರಾಜ್ಯ ನಾಯಕರೇ ಅಧಿಕಾರಕ್ಕಾಗಿ ಈ ರೀತಿ ಕಿತ್ತಾಡುತ್ತಿರುವಾಗ, ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ತಮ್ಮದೇ ಆದ ಜನಪ್ರಿಯತೆ ಹೊಂದಿರುವ ನಾಯಕರು ಮುಂಬರುವ ದಿನಗಳಲ್ಲಿ ತಮಗೂ ಅಧಿಕಾರ ಬೇಕೆಂದು ಕೂಗು ಮೊದಲಿಟ್ಟರೆ, ಸಂಘಟನೆಗೆ ಕೊಡಬೇಕಾದ ಒತ್ತನ್ನು ಸಮಾಧಾನಕ್ಕೆ ನೀಡಬೇಕಾಗಿ ಬರುತ್ತದೆ ಎಂಬ ಆತಂಕ ಇದೀಗ ಸ್ವತಃ ಸಿಎಂ ಸ್ಥಾನ ಆಕಾಂಕ್ಷಿಯಾಗಿರುವ ಡಿ.ಕೆ. ಶಿವಕುಮಾರ್ ಅವರನ್ನು ಕಾಡುತ್ತಿದೆ.
ಕೊಡುಗೆ ಕಡಿಮೆ : ಕಳೆದ ಕೆಲ ವರ್ಷದಿಂದ ರಾಜ್ಯ ಕಾಂಗ್ರೆಸ್ ಸಂಘಟನೆ, ಬಲವರ್ಧನೆ, ಕಾರ್ಯಕರ್ತರ ಒಗ್ಗೂಡಿಸುವಿಕೆ, ಅವರಿಗೆ ಹುರುಪು ತುಂಬುವುದು, ಅಧಿಕಾರ ಸಿಗುವಂತೆ ಮಾಡುವ ಯಾವ ಪ್ರಯತ್ನವನ್ನೂ ಮಾಡದ ಹಲವು ನಾಯಕರು, ತಾವು ಸಿಎಂ ಆಕಾಂಕ್ಷಿ ಎನ್ನುತ್ತಿದ್ದಾರೆ. ಇದು ಕಾರ್ಯಕರ್ತರಲ್ಲಿ ಸೋಜಿಗ ಮೂಡಿಸುತ್ತಿದೆ.
ಇಂತವರೇ ಸಿಎಂ ಆದರೆ, ಅಲ್ಲದೇ ಒಬ್ಬರೇ ಮತ್ತೆ ಮತ್ತೆ ಅಧಿಕಾರಕ್ಕೆ ಬರುವ ಅವಕಾಶ ಇದ್ದರೆ ನಾವ್ಯಾಕೆ ಪಕ್ಷ ಸಂಘಟನೆ ಮಾಡಬೇಕು. ಈಗ ಅಧಿಕಾರದಲ್ಲಿರುವವರು, ಜನಪ್ರಿಯ ವ್ಯಕ್ತಿಗಳು, ಹಿಂದೆ ಅಧಿಕಾರದಲ್ಲಿದ್ದವರಿಗೇ ಅವಕಾಶ ಸಿಗುತ್ತದೆ ಎಂದಾದರೆ ಸಂಘಟನೆ ವಿಚಾರದಲ್ಲಿ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ಕೆಲ ಯುವ ನಾಯಕರು, ಕಾರ್ಯಕರ್ತರು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್ ಸಂಘಟನೆಯ ಬುಡಕ್ಕೆ ಕಂಟಕ ತಂದಿಡುವ ಸಾಧ್ಯತೆ ಇದೆ. ಇದಕ್ಕೆಲ್ಲಾ ಕಾಂಗ್ರೆಸ್ ರಾಜ್ಯ ನಾಯಕರು ಮುಂದಿನ ದಿನಗಳಲ್ಲಿ ಯಾವ ರೀತಿಯ ಎಚ್ಚರಿಕೆ ಹೆಜ್ಜೆ ಇಡಲಿದ್ದಾರೆ, ಕಾರ್ಯಕರ್ತರಿಗೆ ಯಾವ ರೀತಿ ಸ್ಫೂರ್ತಿ ಸಂದೇಶ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.