ಬೆಂಗಳೂರು: ಹೊಸ ವರ್ಷಾಚರಣೆ ಅಂದ್ಮೇಲೆ ಮೋಜು ಮಸ್ತಿಗೇನು ಕಡಿಮೆ ಇರಲ್ಲ. ಕೆಲವರು ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ನ್ಯೂ ಇಯರ್ ಆಚರಿಸಿದ್ರೆ, ಇನ್ನೂ ಕೆಲವರು ಮನೆ ಸುತ್ತಮುತ್ತಲಿನ ಪಾರ್ಕ್, ಪ್ಲೇ ಗ್ರೌಂಡ್ಗಳಲ್ಲಿ ಸಂಭ್ರಮಾಚರಣೆ ಮಾಡ್ತಾರೆ. ಆದ್ರೆ, ಇಂದು ಮೋಜು ಮಸ್ತಿಗೆಂದು ಪಾರ್ಕ್ ಮತ್ತು ಆಟದ ಮೈದಾನಗಳತ್ತ ತೆರಳುವವರಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ ರವಾನಿಸಿದೆ.
ಹೊಸ ವರ್ಷಾಚರಣೆ ಹೆಸರಲ್ಲಿ ಸ್ವಚ್ಛಂದವಾಗಿರುವ ಪಾರ್ಕ್ ಮತ್ತು ಆಟದ ಮೈದಾನಗಳಲ್ಲಿ ಕುಡಿದು, ತಿಂದು ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನು ಎಸೆದು ಹೋಗುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಈಗಾಗಲೇ ಎಚ್ಚರಿಕೆ ನೀಡಿದೆ. ಯಾರಾದರೂ ಈ ರೀತಿ ಮಾಡಿದರೆ ಅವರ ವಿರುದ್ಧ ದೂರು ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತರು ಇಂದು ಹೇಳಿದ್ದಾರೆ.
ಪಾರ್ಕ್‌ಗಳಲ್ಲಿ ಪಾರ್ಟಿ ಮಾಡುವವರ ಮೇಲೆ ನಿಗಾ ಇಡಲು ಈಗಾಗಲೇ ಗಸ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಈ ಸಂಬಂಧ ಮಾಹಿತಿಗಾಗಿ ಪಾರ್ಕ್ಗಳ ಮುಂದೆ ಬಿತ್ತಿ ಪತ್ರಗಳನ್ನು ಸಹ ಅಂಟಿಸಲಾಗಿದೆ. ಇಷ್ಟಾಗಿಯೂ ಕಣ್ತಪ್ಪಿಸಿ ಯಾರಾದರು ಸೆಲೆಬ್ರೇಶನ್ಗೆ ಮುಂದಾದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.