ಬೆಂಗಳೂರು: ಕೋವಿಡ್ ದೇಶದ ಮೂಲೆ ಮೂಲೆಯ ಹಳ್ಳಿಗಳಿಗೂ ಹಬ್ಬಿದೆ. ಹೆಚ್ಚು ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲೂ ಪರಿಣಾಮಕಾರಿಯಾಗಿ ಕೋವಿಡ್ ಸೋಂಕು ಪರೀಕ್ಷೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸಿ ರವಾನಿಸುವುದು ಸದ್ಯದ ಅಗತ್ಯ. ಇದಕ್ಕೆ ಪರಿಹಾರವಾಗಿ ಅಝೂಕ ಪ್ರಯೋಗಾಲಯ ಹೊಸ ಸಂಶೋಧನೆಯೊಂದನ್ನು ನಡೆಸಿದೆ.
ಕೋವಿಡ್ ಸೋಂಕು ಪರೀಕ್ಷೆಗೆ ಜನರಿಂದ ಮಾದರಿ ಸಂಗ್ರಹದ ಬಳಿಕ ಅದನ್ನು ಬಹಳ ಮುತುವರ್ಜಿಯಿಂದ ಹಾಗೂ ಇಂತಿಷ್ಟೇ ಶೀತಲ ವಾತಾವರಣದಲ್ಲಿ ಪ್ರಯೋಗಾಲಯಕ್ಕೆ ಸಾಗಿಸಬೇಕಿರುವುದು ಅನಿವಾರ್ಯ.
ಅಝೂಕ ಲ್ಯಾಬ್ ಸ್ಟಾರ್ಟ್ಅಪ್ ಸಂಸ್ಥೆಯ ಹೊಸ ಸಂಶೋಧನೆ
ಆದರೆ ಈಗ ಬೆಂಗಳೂರಿನ ಅಝೂಕ ಲ್ಯಾಬ್ ಸ್ಟಾರ್ಟ್ಅಪ್ ಸಂಸ್ಥೆ ಹೊಸ ಸಂಶೋಧನೆಯೊಂದನ್ನು ಮಾಡಿ ಮಾದರಿ ರವಾನೆಗೆ ಹೊಸ ದಾರಿ ಕಂಡುಹಿಡಿದಿದೆ. ಅಝೂಕ ಸಂಸ್ಥೆ ಐಐಎಸ್ಸಿ ಸಂಸ್ಥೆಯ ಕೋವಿಡ್ ಸ್ಪಂದನೆಯ ಭಾಗವಾಗಿ, ಆರ್.ಎನ್.ಎ. ರ್ರಾಪರ್ಅನ್ನು ಪತ್ತೆ ಹಚ್ಚಿದ್ದು, ಈ ಕಿಟ್ನಲ್ಲಿ ಕೋವಿಡ್ ಸೋಂಕಿತರ ಅಥವಾ ಲಕ್ಷಣ ಇರುವವರ ಗಂಟಲು ದ್ರವದ ಮಾದರಿ ಸಂಗ್ರಹಿಸಿದ ಬಳಿಕ ಮಾದರಿಯನ್ನು ಸಾಮಾನ್ಯ ಉಷ್ಣತೆಯಲ್ಲಿ ಪ್ರಯೋಗಾಲಯಕ್ಕೆ ರವಾನಿಸಬಹುದಾಗಿದೆ. ಅಲ್ಲದೆ ಏಳು ದಿನ ಇದೇ ಉಷ್ಣತೆಯಲ್ಲಿ ದ್ರವ ಮಾದರಿ ಸಂಗ್ರಹಿಸಿಡಬಹುದಾಗಿದೆ.
ಈವರೆಗೆ ಗಂಟಲು ದ್ರವದ ಮಾದರಿ ರವಾನೆಗೆ ರೆಫ್ರಿಜರೇಟರ್ ಇರುವ ವಾಹನದ ಮೂಲಕವೇ ಅತ್ಯಂತ ಶೀತಲ ವಾತಾವರಣದಲ್ಲಿ ಕಾಪಾಡಿ ರವಾನಿಸಬೇಕಿತ್ತು. ಈ ಕಿಟ್ ಮೂಲಕ ಡ್ರೈ ಐಸ್ ಅಥವಾ ಜೆಲ್ ಪ್ಯಾಕ್ ಅಗತ್ಯವಿಲ್ಲದೆ ರವಾನಿಸಬಹುದಾಗಿದೆ.
![ಅಝೂಕ ಲ್ಯಾಬ್ ಸಂಶೋಧನೆ](https://etvbharatimages.akamaized.net/etvbharat/prod-images/9902756_nin.jpg)
ತಜ್ಞರ ಪ್ರಕಾರ, ಮಾದರಿ ರವಾನೆ ವೇಳೆ ಸಂಗ್ರಹಿಸಿಟ್ಟಿರುವ ವಾತಾವರಣದಲ್ಲಿ ಏರುಪೇರಾದರೆ ಆರ್ಟಿ-ಪಿಸಿಆರ್ ಪರೀಕ್ಷೆ ವಿಫಲವಾಗಲಿದೆ. ಹೀಗಾಗಿ ಇದರಿಂದ ಆಗ್ತಿದ್ದ ತೊಂದರೆಯನ್ನು ಆರ್ಎನ್ಎ ರ್ರಾಪರ್ ಬಗೆಹರಿಸಲಿದೆ. ಆರ್ಎನ್ಎ ರ್ರಾಪರ್ವೊಂದರ ಬೆಲೆ 99 ರೂಪಾಯಿಗಳು. ಆರ್ಎನ್ಎ ರ್ರಾಪರ್ ಆರ್ಟಿ-ಪಿಸಿಆರ್ ಪ್ರಯೋಗಕ್ಕೆ ಬೇಕಾಗಿರುವ ಡಿಎನ್ಎ/ಆರ್ಎನ್ಎ ಅಂಶಗಳನ್ನು ಮಾತ್ರ ಉಳಿಸುತ್ತದೆ. ವೈರಸ್ಗಳನ್ನು ಚಟುವಟಿಕೆ ರಹಿತವಾಗಿ ಮಾಡುತ್ತದೆ. ಜೊತೆಗೆ ದ್ರವದ ಮಾದರಿ ಹೊರಗೆ ಚೆಲ್ಲಲ್ಪಟ್ಟರೂ ಮತ್ತೊಬ್ಬರಿಗೆ ತಗುಲದಂತೆ ತಡೆಯಬಹುದಾಗಿದೆ.
ಓದಿ: ಕುರುಬ ಎಸ್‌ಟಿ ಮೀಸಲು ಹೋರಾಟ: ಬೃಹತ್ ಸಮಾವೇಶದ ಪೂರ್ವಭಾವಿ ಸಭೆ
ಐಐಎಸ್ಸಿ ಸಂಶೋಧನೆ ಹಾಗೂ ಅಭಿವೃದ್ಧಿ ಸೊಸೈಟಿಯ ವೈಜ್ಞಾನಿಕ ಸಲಹೆಗಾರರಾದ ಡಾ. ಸಿ.ವಿ.ನಟರಾಜ್ ಮಾತನಾಡಿ, ಕೋವಿಡ್ ಸಮಯದಲ್ಲಿ ರೋಗ ಪರೀಕ್ಷೆ ಬಹಳ ಮುಖ್ಯ. ಇದರಲ್ಲಿ ಎರಡು ಅಂಶ ಸೂಕ್ಷ್ಮವಾಗಿದ್ದು, ಸೋಂಕಿನ ಲಕ್ಷಣ ಇದ್ದವರ ಗಂಟಲು ದ್ರವದ ಮಾದರಿ ಸಂಗ್ರಹ ಹಾಗೂ ಆ ಸ್ಯಾಂಪಲ್ಗಳನ್ನು ಸರಿಯಾದ ರೀತಿಯಲ್ಲಿ ಪ್ರಯೋಗಾಲಯಕ್ಕೆ ರವಾನಿಸಬೇಕು. ಸರಿಯಾದ ಕ್ರಮದಲ್ಲಿ ರವಾನಿಸದಿದ್ದರೆ ಪರೀಕ್ಷೆ ಹಾಳಾಗಲಿದೆ. ರವಾನಿಸಿದ ಬಳಿಕ ಪ್ರಯೋಗಾಲಯದಲ್ಲಿ ಆರ್ಟಿಪಿಸಿಆರ್ ಟೆಸ್ಟ್ ಮಾಡಬಹುದಾಗಿದೆ. ಅಝೂಕ ಲ್ಯಾಬ್ನವರ ಉತ್ತಮ ಸಂಶೋಧನೆಯಿಂದ ಸ್ಯಾಂಪಲ್ ರವಾನೆ ಮಾಡುವಾಗ ಸ್ಯಾಂಪಲ್ಅನ್ನು ಕೋಣೆಯ ವಾತಾವರಣದಲ್ಲಿ ಅಂದರೆ ಹೆಚ್ಚು ತಣ್ಣಗಿರುವ ವಾತಾವರಣದಲ್ಲಿ ರವಾನಿಸುವ ಅಗತ್ಯ ಇಲ್ಲದ ರೀತಿ ಸಂಶೋಧಿಸಲಾಗಿದೆ.
ಅಲ್ಲದೆ ಸ್ಯಾಂಪಲ್ನಿಂದ ರವಾನಿಸುವವರಿಗೆ ಯಾವುದೇ ಅಪಾಯ ಇಲ್ಲ. ಸೋಂಕು ಹಬ್ಬುವ ಅಪಾಯ ಇರುವುದಿಲ್ಲ ಎಂದು ಈಟಿವಿ ಭಾರತ್ಗೆ ತಿಳಿಸಿದರು.
ಅಝೂಕ ಲ್ಯಾಬ್ಸ್ ಪ್ರೈ.ಲಿ.ನ ಸಹ ಸಂಸ್ಥಾಪಕಿ ಹಾಗೂ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ. ಫಾತಿಮಾ ಮಾತನಾಡಿ, ಪರಿಣಾಮಕಾರಿಯಾಗಿ ಹಳ್ಳಿ ಪ್ರದೇಶ, ಗ್ರಾಮೀಣ ಪ್ರದೇಶಗಳಿಂದಲೂ ಕೋವಿಡ್ ಮಾದರಿ ಸಂಗ್ರಹಿಸಿ ರವಾನೆ ಮಾಡಲು ಅತ್ಯಂತ ಅಗತ್ಯ ಇರುವ 'ಆರ್ಎನ್ಎ ರ್ರಾಪರ್'ಅನ್ನು ಅಝೂಕ ಸಂಸ್ಥೆ ಸಂಶೋಧನೆ ನಡೆಸಿದೆ ಎಂದರು.