ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಪರೀಕ್ಷೆಗಾಗಿ (ಎಫ್ಎಸ್ಎಲ್) ಸಂಗ್ರಹಿಸುವ ಮಾದರಿಗಳನ್ನು 15 ದಿನದೊಳಗೆ ರವಾನಿಸಬೇಕು ಎಂದು ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.
ರಾಜ್ಯದ ಜಿಲ್ಲಾ ಎಸ್ಪಿ, ರೈಲ್ವೆ ಎಸ್ಪಿ ಸೇರಿದಂತೆ ರಾಜ್ಯದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತ್ವರಿತವಾಗಿ ಪರೀಕ್ಷೆ ನಡೆಸಲು ಪ್ರಯೋಗಾಲಯಗಳಿಗೆ ಸಂಗ್ರಹಿಸಿದ ಮಾದರಿಗಳನ್ನು ಪರೀಕ್ಷೆಗೆ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಪರಾಧ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಸಂಗ್ರಹಿಸಿದ ಹಾಗೂ ಜಪ್ತಿ ಮಾಡಿಕೊಂಡ ಮಾದರಿ ವಸ್ತುಗಳನ್ನು 15 ದಿನದೊಳಗೆ ಕಾನೂನು ಪ್ರಕ್ರಿಯೆ ಮುಗಿಸಿ ಎಫ್ಎಸ್ಎಲ್ಗೆ ಕಳುಹಿಸಬೇಕು. ಒಂದು ವೇಳೆ ವರದಿ ಸಲ್ಲಿಸುವುದು 30 ದಿನಗಳವರೆಗೆ ವಿಳಂಬವಾದರೆ ಸ್ಥಳೀಯ ಡಿಸಿಪಿಯಿಂದ ಸಹಿ ಪಡೆದು ಪ್ರತ್ಯೇಕವಾಗಿ ವರದಿ ಲಗತ್ತಿಸಬೇಕು. 30 ದಿನಗಳ ನಂತರ ವರದಿ ಸಲ್ಲಿಸುವುದು ತಡವಾದರೆ ರಾಜ್ಯ ಅಪರಾಧ ಹಾಗೂ ತಾಂತ್ರಿಕ ವಿಭಾಗದ ಎಡಿಜಿಪಿಯಿಂದ ಅನುಮತಿ ಪಡೆಯಬೇಕು ಎಂದು ಸೂಚಿಸಿದರು.
ಪ್ರಕರಣದಲ್ಲಿ ತನಿಖಾಧಿಕಾರಿಗಳು ಬಿ' ರಿಪೋರ್ಟ್ ವರದಿ ಸಲ್ಲಿಸಬೇಕಾದರೆ, ಪ್ರಕರಣದಲ್ಲಿ ಸಂಬಂಧಪಟ್ಟ ವ್ಯಕ್ತಿ ಏನಾದರೂ ಮೃತರಾದಾಗ ಅಥವಾ ಪ್ರಕರಣದಲ್ಲಿ ಏನಾದರೂ ಬೆಳವಣಿಗೆಯಾದಾಗ ಕೂಡಲೇ ವಾಸ್ತವಾಂಶವನ್ನು ಎಫ್ಎಸ್ಎಲ್ಗೆ ತಿಳಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಎಫ್ಎಸ್ಎಲ್ ಸ್ಯಾಂಪಲ್ ಕಳುಹಿಸುವ ಕುರಿತಂತೆ ಈ ಹಿಂದೆ ಹೊರಡಿಸಿದ್ದ ಆದೇಶ ರದ್ದುಪಡಿಸಿ ಪರಿಷ್ಕೃತ ಆದೇಶ ಹೊರಡಿಸಿರುವುದಾಗಿ ಪ್ರವೀಣ್ ಸೂದ್ ತಿಳಿಸಿದ್ದಾರೆ.