ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: 4 ದಿನಗಳಲ್ಲಿ ಕಾರ್ಯಪಡೆಯಿಂದ ವರದಿ... - ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ರಚಿಸಲಾಗಿರುವ ಕಾರ್ಯಪಡೆ ಇನ್ನು ನಾಲ್ಕು ದಿನಗಳಲ್ಲಿ ಅಂತಿಮ ವರದಿ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ಕೇಂದ್ರ ಘಟಕಕ್ಕೆ ಮಾಹಿತಿ ನೀಡಿದರು.

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ರಚಿಸಲಾಗಿರುವ ಕಾರ್ಯಪಡೆ ಇನ್ನು ನಾಲ್ಕು ದಿನಗಳಲ್ಲಿ ಅಂತಿಮ ವರದಿ ನೀಡಲಿದ್ದು, ಅದು ಕೈಸೇರಿದ ಕೂಡಲೇ ರಾಜ್ಯದಲ್ಲಿ ಶಿಕ್ಷಣ ನೀತಿ ಅನುಷ್ಟಾನದತ್ತ ಸರ್ಕಾರ ಹೆಜ್ಜೆ ಇಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ಕೇಂದ್ರ ಘಟಕಕ್ಕೆ ಮಾಹಿತಿ ನೀಡಿದರು.
ಬೆಂಗಳೂರಿನಿಂದಲೇ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಕಾರ್ಯಪಡೆಯು ಶಿಕ್ಷಣ ನೀತಿಯನ್ನು ಹೇಗೆ ಜಾರಿ ಮಾಡಬೇಕು ಎಂಬ ಬಗ್ಗೆ ಅತ್ಯಂತ ಪರಿಣಾಮಕಾರಿ ಹಾಗೂ ರಚನಾತ್ಮಕವಾದ ವರದಿಯನ್ನು ನೀಡುವ ವಿಶ್ವಾಸವಿದೆ ಎಂದರು.
ಇಡೀ ನೀತಿಯನ್ನು ಎಷ್ಟು ಹಂತಗಳಲ್ಲಿ ಹಾಗೂ ಯಾವ ಯಾವ ದಿಕ್ಕಿನಲ್ಲಿ ಜಾರಿ ಮಾಡಬೇಕೆಂಬ ಮಾಹಿತಿ ವರದಿಯಿಂದ ತಿಳಿಯಲಿದೆ. ಆ ವರದಿ ಸಿಕ್ಕ ಕೂಡಲೇ ನೀತಿಯ ಜಾರಿಯತ್ತ ದೃಢವಾದ ಹೆಜ್ಜೆಗಳನ್ನು ಇಡಲಾಗುವುದು. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಕ್ಷಣ ನೀತಿ ಜಾರಿಯ ಬಗ್ಗೆ ಎಲ್ಲಾ ರಾಜ್ಯಪಾಲರುಗಳು, ಶಿಕ್ಷಣ ಸಚಿವರು ಹಾಗೂ ಕುಲಪತಿಗಳ ಜತೆ ದಿಲ್ಲಿಯಿಂದಲೇ ಆನ್ ಲೈನ್ ಸಂವಾದ ನಡೆಸಲಿದ್ದಾರೆ.
ಜಾರಿಗೆ ಸರ್ವಸಿದ್ಧತೆ:
ಶಿಕ್ಷಣ ನೀತಿಯಲ್ಲಿರುವ ಅಂಶಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಮಾಹಿತಿ ಇದೆ. ಹಾಗಾಗಿ ಈಗಾಗಲೇ ಸರ್ಕಾರವು ಕಾರ್ಯಪಡೆ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಜೊತೆಗೆ, ಎಲ್ಲಾ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳ ಜೊತೆಯಲ್ಲೂ ಸಮಾಲೋಚನೆ ನಡೆಸಲಾಗಿದೆ. ಹಲವಾರು ವೆಬಿನಾರ್ಗಳನ್ನು ಆಯೋಜಿಸಲಾಗಿದೆ. ವಿವಿಧ ಕ್ಷೇತ್ರಗಳ ತಜ್ಞರ ಜತೆಯಲ್ಲೂ ಚರ್ಚಿಸಲಾಗಿದೆ. ಸಮಾಜದ ಎಲ್ಲಾ ವರ್ಗದ ಜನರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿಕ್ಷಣ ನೀತಿಯ ಬಗ್ಗೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ಹೀಗಾಗಿ ಇಡೀ ನೀತಿಯನ್ನು ಅತ್ಯಂತ ರಚನಾತ್ಮಕವಾಗಿ ಜಾರಿ ಮಾಡಲು ಸರ್ವರೀತಿಯಲ್ಲೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.
ಇದರ ಜೊತೆಯಲ್ಲಿ ನೀತಿಯ ಜಾರಿಯ ಬಗ್ಗೆ ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆಡಳಿತ ಯಂತ್ರವನ್ನು ಎಲ್ಲಾ ರೀತಿಯಲ್ಲೂ ಸಜ್ಜುಗೊಳಿಸಲಾಗಿದೆ. ಹಾಗೆಯೇ, ಶಿಕ್ಷಣ ನೀತಿ ಜಾರಿಗೆ ಬಂದ ನಂತರ ಶೈಕ್ಷಣಿಕ ಸಾಂಸ್ಥಿಕ ರಚನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಅಧಿಕಾರ ವಿಕೇಂದ್ರೀಕರಣವಾಗಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಅಧಿಕಾರ ಸಿಗಲಿದೆ.
ಇದರಿಂದ ಮುಂದಿನ ದಿನಗಳಲ್ಲಿ ಬೋಧನೆ ಮತ್ತು ಸಂಶೋಧನೆ ದಿಕ್ಕಿನಲ್ಲಿ ಹೆಚ್ಚು ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಜೊತೆಗೆ, ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ಬಹು ವಿಷಯಗಳ ಕಲಿಕೆ ಹಾಗೂ ವಿಷಯಗಳ ಆಯ್ಕೆಯ ಬಗ್ಗೆ ಹೆಚ್ಚು ಅವಕಾಶಗಳು ಇರುತ್ತವೆ. ಕರ್ನಾಟಕ ರಾಜ್ಯಕ್ಕೆ ಇದರಿಂದ ಹೆಚ್ಚೆಚ್ಚು ಪ್ರಯೋಜನ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು.