ಬೆಂಗಳೂರು : ಕೆಪಿಸಿಸಿ ನೂತನ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದರು.
ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಿದರು. ಈ ವೇಳೆ ಸಿದ್ದರಾಮಯ್ಯ ಅವರು ಸಹ ಡಿ ಕೆ ಶಿವಕುಮಾರ್ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು. ಇದಾದ ಬಳಿಕ ಪಕ್ಷ ಸಂಘಟನೆ ಬಗ್ಗೆ ಉಭಯ ನಾಯಕರು ಸುದೀರ್ಘ ಚರ್ಚೆ ನಡೆಸಿದರು. ನಂತರ ಸಿದ್ದರಾಮಯ್ಯನವರ ಸಹಕಾರ ಕೋರಿ ಅಲ್ಲಿಂದ ಡಿಕೆಶಿ ತೆರಳಿದರು. ಈ ವೇಳೆ ಸಂಸದ ಡಿ ಕೆ ಸುರೇಶ್ ಸಹ ಹಾಜರಿದ್ದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಕೃತಜ್ಞತೆ ಸಲ್ಲಿಸಲು ಬಂದಿದ್ದೆ ಅಷ್ಟೇ.. ಕೊರೊನಾ ಬಗ್ಗೆ ಹೆಚ್ಚು ಭಯ ಮೂಡಿಸುವುದು ಬೇಡ. ಸರ್ಕಾರ ಈ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸಲಿ. ಇದೇ ಸಂದರ್ಭದಲ್ಲಿ ಹೊಸೂರಿನ ಡಿಎಂಕೆ ಸ್ಥಳೀಯ ಮುಖಂಡರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಜತೆಗೆ ಉಭಯ ನಾಯಕರಿಗೆ ಸಹಕಾರ ನೀಡೋದಾಗಿ ಡಿಎಂಕೆ ನಾಯಕರು ಭರವಸೆ ನೀಡಿದರು.
![DKShivkumar visits kharge residence](https://etvbharatimages.akamaized.net/etvbharat/prod-images/6406720_thum.jpg)
ಖರ್ಗೆ ನಿವಾಸಕ್ಕೂ ಡಿಕೆಶಿ : ಸಿದ್ದರಾಮಯ್ಯನವರ ಭೇಟಿ ಬಳಿಕ ಡಿ ಕೆ ಶಿವಕುಮಾರ್ ಅವರು, ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸಕ್ಕೂ ತೆರಳಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಸದ ಡಿ ಕೆ ಸುರೇಶ್, ಕುಣಿಗಲ್ ಶಾಸಕ ಡಾ.ರಂಗನಾಥ್ ಸಹ ಹಾಜರಿದ್ದರು.