ಬೆಂಗಳೂರು: ಸಚಿವ ಸಂಪುಟ ರಚನೆ ಸಂಬಂಧ ಮಾತುಕತೆ ನಡೆಸಲು ನೂತನ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು, ಜುಲೈ 30 ರಂದು ದೆಹಲಿ ಪ್ರವಾಸಕ್ಕೆ ತೆರಳುವುದು ಬಹುತೇಕ ಖಚಿತವಾಗಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರದ ನಂತರ ಕೇಂದ್ರದ ವೀಕ್ಷಕರಾಗಿ ಬಂದಿದ್ದ, ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದರು. ರಾಜ್ಯದಲ್ಲಿ ನೆರೆ ಹಾವಳಿ ಇದ್ದು, ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ. ಕೊರೊನಾ ನಿಯಂತ್ರಣದಲ್ಲಿದ್ದರೂ ಮೂರನೇ ಅಲೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಹಾಗಾಗಿ ಸಚಿವ ಸಂಪುಟದ ತುರ್ತು ಅಗತ್ಯವಿದೆ. ಸಂಪುಟ ರಚನೆ ವಿಳಂಬವಾದಲ್ಲಿ ಸಮಸ್ಯೆಗಳು ತಲೆದೂರಲಿವೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು.
ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವ ಹೈಕಮಾಂಡ್, ದೆಹಲಿಗೆ ಬರುವಂತೆ ಸಿಎಂಗೆ ಸೂಚನೆ ನೀಡಿದ್ದಾರೆ. ಎರಡು ಮೂರು ದಿನದಲ್ಲಿ ದೆಹಲಿಗೆ ಬಂದು ಚರ್ಚೆ ನಡೆಸಿ ಎಂದು ತಿಳಿಸಿದ್ದಾರೆ.
ನಾಳೆ ಉತ್ತರ ಕನ್ನಡ ಜಿಲ್ಲೆ ಪ್ರವಾಸಕ್ಕೆ ತೆರಳುತ್ತಿರುವ ಸಿಎಂ ಜುಲೈ 30 ಅಥವಾ 31 ರಂದು ದೆಹಲಿಗೆ ತೆರಳುವುದು ಬಹುತೇಕ ಖಚಿತವಾಗಿದೆ. ವರಿಷ್ಠರಿಗೆ ಧನ್ಯವಾದ ಅರ್ಪಿಸುವ ಜೊತೆ ಸಚಿವ ಸಂಪುಟ ರಚನೆ ಕುರಿತು ವಿಸ್ತೃತವಾದ ಚರ್ಚೆ ನಡೆಸಲಿದ್ದಾರೆ. ಸಂಭಾವ್ಯ ಪಟ್ಟಿಯನ್ನು ವರಿಷ್ಠರ ಮುಂದಿಟ್ಟು ವರಿಷ್ಠರ ಸಲಹೆ ಸೂಚನೆಯಂತೆ ಸಚಿವರಾಗುವವರ ಹೆಸರನ್ನು ಅಂತಿಮಗೊಳಿಸಿಕೊಂಡು ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.