ಯಲಹಂಕ( ಬೆಂಗಳೂರು): ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಬೆಂಗಳೂರಿನ ವಿದ್ಯಾರ್ಥಿನಿ ಆ್ಯಪ್ವೊಂದನ್ನು ಅವಿಷ್ಕಾರ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬೆಂಗಳೂರಿನ ಯಲಹಂಕದ ಸೃಷ್ಠಿ ಇನ್ಸ್ಟಿಟ್ಯೂಟ್‌ನಲ್ಲಿ ಆರ್ಟ್, ಡಿಸೈನ್ ಮತ್ತು ಟೆಕ್ನಾಲಜೀಸ್ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿನಿ ನೂಪುರ್ ಪಾಟ್ನಿ ಆ್ಯಪ್ ಕಂಡು ಹಿಡಿದ ವಿದ್ಯಾರ್ಥಿನಿ . ಶೈಕ್ಷಣಿಕ ವಿದ್ಯಾಭ್ಯಾಸದ ಅಂಗವಾಗಿ ಪ್ರಾಜೆಕ್ಟ್ ಒಂದನ್ನ ಆಯ್ಕೆ ಮಾಡುವಾಗ ನೂಪುರ್ ಪಾಟ್ನಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬೆಂಗಳೂರು ನಗರದಲ್ಲಿ ಲೈಂಗಿಕ ಕಿರುಕುಳ ಘಟನೆಗಳನ್ನು ತಡೆಯಲು ಪ್ರಾಜೆಕ್ಟ್ ತಯಾರಿಸಿದ ಆಕೆ ಅದಕ್ಕೆ 'ಇಟ್ಸ್ ನಾಟ್ ಮೈ ಫಾಲ್ಟ್' ಹೆಸರನ್ನಿಟ್ಟಿದ್ದಾರೆ.
ನೂಪುರ್ ಪಾಟ್ನಿ ತನ್ನ ವೈಯಕ್ತಿಕ ಅನುಭವದ ಆಧಾರದ ಮೇಲೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಮುಂದಾಗಿದ್ದು. ಮೆಜೆಸ್ಟಿಕ್ ನಾ ಮೆಟ್ರೋ ನಿಲ್ದಾಣದಲ್ಲಿ ನಾನು ಫ್ಲ್ಯಾಟ್ ಫಾರಂ ತಲುಪುವ ವರೆಗೂ ಮೂವರು ಪುರುಷರು ನನ್ನನ್ನೇ ಹಿಂಬಾಲಿಸಿ ಕೊಂಡು ಬರುತ್ತಿದ್ದರು. ನಾನು ಈ ಘಟನೆಯನ್ನು ಯಾರಿಗೂ ಹೇಳಲು ಸಹ ಸಾಧ್ಯವಾಗಲಿಲ್ಲ. ಇಂತಹ ಅನುಭವಗಳನ್ನು ಸಾಕಷ್ಟು ವರ್ಷಗಳಿಂದ ಗಮಿಸುತ್ತಲೇ ಬಂದಿದ್ದೇನೆ. ಹಾಗೆಯೇ ಸಾಕಷ್ಟು ಮಹಿಳೆಯರು ತಮ್ಮ ಮೇಲೆ ಆಗುತ್ತಿರುವ ಲೈಂಗಿಕ ಕಿರುಕುಳವನ್ನು ಹೇಳುವುದಿಲ್ಲ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ನೂಪುರ್ ಪಾಟ್ನಿ ಲೈಂಗಿಕ ಕಿರುಕುಳ ವಲಯಗಳನ್ನು ಗುರುತಿಸಲು ಮ್ಯಾಪ್ ಯೋಜನೆಯನ್ನು ಮಾಡಿದ್ದು, ಬೆಂಗಳೂರು ನಗರದಲ್ಲಿ ಲೈಂಗಿಕ ಕಿರುಕುಳ ವಲಯಗಳ ಬಗ್ಗೆ ಮಾಹಿತಿಯನ್ನ ಮ್ಯಾಪ್ ಪಿನ್ (ಗುರುತು) ಮಾಡುವ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ ನಗರದಲ್ಲಿನ ಲೈಂಗಿಕ ಶೋಷಣೆಯ ಮಾಹಿತಿ ಸಹ ಸಿಗಲಿದೆ. ನಗರದ ಯಾವುದೇ ಸ್ಥಳದಲ್ಲಿ ಯಾವುದೇ ರೀತಿಯ ಲೈಂಗಿಕ ಕಿರುಕುಳ ನಡೆದಿದ್ದರು ಆ ಬಗ್ಗೆ ಮಹಿಳೆಯರು ಮಾಹಿತಿ ನೀಡಬಹುದಾಗಿದೆ.
ನಗರದ ವಿವಿಧ ಸ್ಥಳಗಳಲ್ಲಿ ನಡೆದ ಲೈಂಗಿಕ ಕಿರುಕುಳ ಘಟನೆಗಳ ಬಗ್ಗೆ ಸಂತ್ರಸ್ತ ಮಹಿಳೆಯರು ನೂಪುರ್ ಪಾಟ್ನಿ ಯೋಜನೆಯ ಮ್ಯಾಪ್‌ನಲ್ಲಿ ಮಾಹಿತಿ ಶೇರ್ ಮಾಡಬಹುದಾಗಿದೆ. ಇದೊಂದು ಉಚಿತ ಸೇವೆಯಾಗಿದ್ದು, ಸಲಹೆಗಳನ್ನು ಸಹ ನೀಡಬಹುದಾಗಿದೆ. ಹಾಗೂ ಸಂತ್ರಸ್ತ ಮಹಿಳೆಯರು ಗುರುತಿಸಿದ ಸ್ಥಳಗಳ ಬಗ್ಗೆ ಮುಂಜಾಗ್ರತೆ ವಹಿಸಲು ಪೋಲಿಸರಿಗೂ ಸಹ ಅನುಕೂಲವಾಗಲಿದೆ ಎನ್ನುವುದು ನೂಪುರ್ ಪಾಟ್ನಿ ಮಾತು.
ಇಟ್ಸ್ ನಾಟ್ ಮೈ ಫಾಲ್ಟ್ ಹೆಸರಿನ ಈ ಯೋಜನೆಯು ಲೈಂಗಿಕ ಕಿರುಕುಳ ಸಂತ್ರಸ್ತರಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನಂತೆ ಕೆಲಸ ಮಾಡುತ್ತೆ . ಮುಂದಿನ ದಿನಗಳಲ್ಲಿ ಈ ಮ್ಯಾಪ್ ಆಪ್ ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯ ಮಾಡುವ ಯೋಜನೆ ಇದೆ ಹಾಗೂ ಇದರಿಂದ ಸುರಕ್ಷಿತವಲ್ಲದ ಸ್ಥಳಗಳ ಬಗ್ಗೆ ಮಹಿಳೆಯರಿಗೆ ಮಾಹಿತಿ ಲಭ್ಯವಾಗಿ ಆ ಸ್ಥಳದಿಂದ ದೂರ ಸರಿಯುವ ಮೂಲಕ ಲೈಂಗಿಕ ದೌರ್ಜನ್ಯದಿಂದ ಪಾರಾಗುತ್ತಾರೆ. ಹಾಗೆಯೇ ಪೊಲೀಸರಿಗೂ ಮಾಹಿತಿ ಹೋಗುವುದರಿಂದ ಲೈಂಗಿಕ ದೌರ್ಜನ್ಯ ಎಸಗುವವರನ್ನ ತಮ್ಮ ವಶಕ್ಕೆ ತೆಗೆದು ಕೊಳ್ಳಬಹುದು.