ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಶುಭಕೃತ ಸಂವತ್ಸರದ ಆರಂಭದ ದಿನವೇ ಹೊಸ ಅತಿಥಿಯ ಆಗಮನವಾಗಿದೆ. ಮುದ್ದಿನ ಸಾಕು ಹಸು ಕರುವಿಗೆ ಜನ್ಮ ನೀಡಿದ್ದು ಬಿಎಸ್ವೈ ನಿವಾಸದಲ್ಲಿನ ಯುಗಾದಿ ಸಂಭ್ರಮ ಮತ್ತಷ್ಟು ಕಳೆಗಟ್ಟುವಂತೆ ಮಾಡಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಗೆ ಹೊಸ ಅತಿಥಿಯ ಸೇರ್ಪಡೆಯಾಗಿದೆ.
ಹಬ್ಬದ ದಿನವೇ ಯಡಿಯೂರಪ್ಪ ಸಾಕುತ್ತಿರುವ ಗಿರ್ ತಳಿಯ ಹಸು ಕರುವಿಗೆ ಜನ್ಮ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವರ ಯಡಿಯೂರಪ್ಪ ಪುತ್ರ ವಿಜಯೇಂದ್ರ, ತಂದೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೋವುಗಳ ಮೇಲೆ ಮೊದಲಿನಿಂದಲೂ ವಿಶೇಷ ಅಕ್ಕರೆ, ಮಮತೆ. ಅವುಗಳ ಮೈದಡುವುದೆ, ಗೋವುಗಳಿಗೆ ಆಹಾರ ಉಣಿಸದೆ ಅವರ ದಿನಚರಿ ಪೂರ್ಣವಾಗುವುದಿಲ್ಲ. ಶುಭಕೃತ್ ಸಂವತ್ಸರದ ಪ್ರಾರಂಭದಲ್ಲಿಯೇ ಮನೆಯ ಗೋವು ಕರುವಿಗೆ ಜನ್ಮ ನೀಡಿದ್ದು ಕುಟುಂಬಕ್ಕೆ ನೂತನ ಸದಸ್ಯನ ಆಗಮನ ನಮ್ಮೆಲ್ಲರಿಗೂ ಅತ್ಯಂತ ಸಂತಸ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಬಿ.ಎಸ್. ಯಡಿಯೂರಪ್ಪ ಅವರಿಗೆ ಗಿರ್ ತಳಿಯ ಎರಡು ಹಸು, ಒಂದು ಕರುವನ್ನು ಉಡುಗೊರೆಯಾಗಿ ನೀಡಿದ್ದರು. ಅವುಗಳಲ್ಲಿ ಹಾಲು ಕೊಡುವ ಹಸುವಿಗೆ ಕಾವೇರಿ ಮತ್ತೊಂದು ಹಸುವಿಗೆ ಕೃಷ್ಣೆ ಹಾಗೂ ಕರುವಿಗೆ ಭೀಮ ಎಂದು ನಾಮಕರಣ ಮಾಡಿ ಕಾವೇರಿ ನಿವಾಸದ ಆವರಣದಲ್ಲಿಯೇ ಶೆಡ್ ನಿರ್ಮಿಸಿ ಸಾಕಲಾಗುತ್ತಿದೆ. ಈಗ ಮತ್ತೊಂದು ಕರು ಕಾವೇರಿಯಲ್ಲಿನ ಕೊಟ್ಟಿಗೆ ಸೇರಿದೆ.
ಪ್ರತಿ ದಿನ ಮುಂಜಾನೆ ತಪ್ಪದೇ ಕಾವೇರಿ ಆವರಣದಲ್ಲಿ ವಾಯು ವಿಹಾರ ಮಾಡಲಿರುವ ಯಡಿಯೂರಪ್ಪ, ಹಸು ಮತ್ತು ಕರುಗಳೊಂದಿಗೆ ಕಾಲ ಕಳೆಯುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಕರುಗಳ ಮೈದಡವುತ್ತಾ ಸಂತಸ ಪಡಲಿದ್ದಾರೆ. ಇದೀಗ ಮತ್ತೊಂದು ಕರು ಕಾವೇರಿಗೆ ಆಗಮಿಸಿರುವುದು ಯಡಿಯೂರಪ್ಪ ಅವರ ಸಂತಸ ಹೆಚ್ಚುವಂತೆ ಮಾಡಿದೆ.