ಬೆಂಗಳೂರು: ರೈತರು ತಮ್ಮ ಮನೆಯಲ್ಲೇ ಕುಳಿತು ಜಮೀನಿನಲ್ಲಿ ಅಳವಡಿಸಿರುವ ವಿದ್ಯುತ್ ಹಾಗೂ ಮೋಟಾರ್ ಪಂಪ್‌ಸೆಟ್ ಆನ್ ಮತ್ತು ಆಫ್ ಮಾಡಬಹುದು. ಅಷ್ಟೇ ಅಲ್ಲ, ಹವಾಮಾನದ ಕುರಿತು ಮೊಬೈಲ್ ಮೂಲಕ ಉಪಯುಕ್ತ ಮಾಹಿತಿ ಪಡೆಯಬಹುದು. ಇಂಥದ್ದೊಂದು ಹೊಸ ಉಪಕರಣವನ್ನು ಸ್ಟಾರ್ಟಪ್ ಕಂಪನಿಯೊಂದು ಅಭಿವೃದ್ಧಿಪಡಿಸಿದೆ.
ಬೆಂಗಳೂರಿನ ಕೃಷಿ ಹೃದಯ ಎಂಬ ಕಂಪನಿಯು 'ಕೆಎಸ್ಎಚ್ 4 ಜಿ ಸ್ಮಾರ್ಟ್ ಸ್ಟಾರ್ಟರ್ಸ್' ಹೆಸರಿನ ಹೊಸ ಡಿವೈಸ್ ಆವಿಷ್ಕರಿಸಿದೆ. ಮನೆಯ ವಿದ್ಯುತ್ ಮೀಟರ್ ರೀತಿ ಜಮೀನುಗಳಲ್ಲಿ ಈ ಸಲಕರಣೆಯನ್ನು ಅಳವಡಿಸಿಕೊಳ್ಳಬಹುದು. ಮಳೆ ಬಂದಾಗ ಅಥವಾ ವಿದ್ಯುತ್ ವ್ಯತ್ಯಯವಾದಾಗ ವಿದ್ಯುತ್ ಹಾಗೂ ನೀರಿನ ಪಂಪ್‌ಸೆಟ್ ಆನ್ ಮತ್ತು ಆಫ್ ಮಾಡಲು ಆ್ಯಪ್ ಮೂಲಕ ಇದು ಕೆಲಸ ಮಾಡುತ್ತದೆ.
ನೂತನ ಉಪಕರಣವನ್ನು ಜಮೀನಿನಲ್ಲಿ ಸುಲಭವಾಗಿ ಅಳವಡಿಸಬಹುದು. ಈ ಡಿವೈಸ್ ಮೂಲಕ ನೀರಿನ ಪಂಪ್‌ಸೆಟ್ ಹಾಗೂ ವಿದ್ಯುತ್ ಮೋಟಾರ್ ಸಂಪರ್ಕ ಎಷ್ಟು ಬಳಸಲಾಗಿದೆ ಎಂಬುದನ್ನು ಅರಿಯಬಹುದು. ದಿನಕ್ಕೆಷ್ಟು ಕರೆಂಟ್ ಬಳಕೆಯಾಗಿದೆ?, ಎಷ್ಟು ಸಮಯದಿಂದ ಬಳಕೆಯಾಗಿದೆ?, ಜಮೀನಿಗೆ ಎಷ್ಟು ನೀರು ಹರಿದಿದೆ ಎಂಬುದನ್ನು ನಿಖರವಾಗಿ ತಿಳಿಯಬಹುದು.
ರೈತರು ಮೊಬೈಲ್ ಆ್ಯಪ್‌ನಲ್ಲಿ ವಿದ್ಯುತ್, ನೀರು ಹಾಗೂ ಹವಾಮಾನ ಮಾಹಿತಿ ಸೇರಿದಂತೆ ಇತರೆ ದತ್ತಾಂಶಗಳ ಮಾಹಿತಿ ಪಡೆಯಲಿದ್ದು, ವಿಶ್ಲೇಷಿಸಬಹುದು. ನೂತನ ಉಪಕರಣಕ್ಕೆ ಏರ್ಟೆಲ್ ಸಿಮ್ ಒದಗಿಸಲಾಗಿದೆ. ಸಿಮ್ ರಿಚಾರ್ಜ್ ಹಣವನ್ನು ಕಂಪನಿಯೇ ಭರಿಸುತ್ತದೆ. ಖರೀದಿ ವೇಳೆ ಒಂದು ಬಾರಿ ಉಚಿತ. ಈ ವೇಳೆ ಕಂಪನಿಯೇ ಟೆಲಿಗ್ರಾಮ್ ಮೂಲಕ ನಿಮ್ಮ ಮೊಬೈಲ್‌ಗೆ ಹವಾಮಾನ ಮಾಹಿತಿಗಳನ್ನು ಕಾಲಕಾಲಕ್ಕೆ ಸಂದೇಶ ರವಾನಿಸುತ್ತದೆ.
ಕೆಎಸ್ಎಚ್ ಉಪಕರಣವು 7.5 ಎಚ್.ಪಿ ಸಾಮರ್ಥ್ಯದ್ದಾಗಿದ್ದು, ಬೆಲೆ 11 ಸಾವಿರ ರೂಪಾಯಿ. ಕೇವಲ ಕಂಟ್ರೋಲರ್ ಮಾತ್ರ ಖರೀದಿಸುವವರಾದರೆ 3 ಎಚ್.ಪಿಯಿಂದ 25 ಎಚ್.ಪಿವರೆಗೂ ಸಾಮರ್ಥ್ಯವಿರಲಿದೆ. ಕಂಟ್ರೋಲರ್ ಬೆಲೆ 9 ಸಾವಿರ ರೂಪಾಯಿ. ಕೃಷಿ ಹೃದಯ ಕಂಪನಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ನೂತನ ಸಲಕರಣೆಯ ಮಾರಾಟ ಮಾಡುತ್ತಿದೆ. ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರೈತರಿಗೆ ಡಿವೈಸ್ ಅನ್ನು ಕೊರಿಯರ್ ಮೂಲಕ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಕಂಪನಿಯ ಸಿಇಒ ದಿನೇಶ್ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ. ಆಸಕ್ತರು 8431158163ಗೆ ಕರೆ ಮಾಡಿ ಸಂಪರ್ಕಿಸಬಹುದು.
ಇದನ್ನೂ ಓದಿ: ಬೆಂಗಳೂರು ಕೃಷಿ ಮೇಳ ಸಂಪನ್ನ.. ಜನರನ್ನು ಆಕರ್ಷಿಸಿದ ಸಿರಿಧಾನ್ಯ ಮೇಳ