ಬೆಂಗಳೂರು: ಸ್ಥಾನದಲ್ಲಿ ಸಣ್ಣದು, ದೊಡ್ಡದು ಎಂಬುದು ಇಲ್ಲ. ಕೊಟ್ಟಿರೋ ಸ್ಥಾನವನ್ನು ಸರ್ಥವಾಗಿ ನಿಭಾಯಿಸಬೇಕು ಎಂದು ವಿಧಾನ ಪರಿಷತ್ ನೂತನ ಸದಸ್ಯೆ ಉಮಾಶ್ರೀ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ವರಿಷ್ಠರು, ಸಿಎಂ, ಎಐಸಿಸಿ ಅಧ್ಯಕ್ಷರು ಖರ್ಗೆ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಎಲ್ಲರೂ ಕೂಡಿ ಆಶೀರ್ವಾದ ಮಾಡಿದ್ದಾರೆ. ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತಿದ್ದೇನೆ. ಸಿದ್ದರಾಮಯ್ಯನವರನ್ನು ಎಲ್ಲರೂ ಪ್ರೀತಿಸ್ತಾರೆ, ಗೌರವಿಸ್ತಾರೆ. ಸಿದ್ದರಾಮಯ್ಯನವರ ಕಾಲದಲ್ಲೇ ಸ್ಥಾನ ಸಿಕ್ಕಿರೋದು ಸಂತೋಷ ಎಂದರು.
ಗೃಹಲಕ್ಷ್ಮಿ ಯೋಜನೆ ಜಾರಿ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಈ ಸರ್ಕಾರ ನುಡಿದಂತೆ ನಡೆದ ಸರ್ಕಾರ. ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ವಿ. ಪ್ರತಿಯೊಂದು ಯೋಜನೆಯನ್ನ ಹಂತಹಂತವಾಗಿ ಜಾರಿ ಮಾಡ್ತಿದ್ದೇವೆ. ನಿನ್ನೆ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿದೆ. ಇದು ಬಹಳ ಅನುಕೂಲಕರವಾದ ಯೋಜನೆ. ಯಾವುದೇ ಮಹಿಳೆಗೆ 2,000 ರೂ. ಸಿಗುತ್ತೆ ಅಂದ್ರೆ ಬಹಳ ಅನುಕೂಲ. ಗೃಹಜ್ಯೋತಿ ಕೂಡ ಅಷ್ಟೇ. ಅನೂಕೂಲ ಆಗುತ್ತೆ. ಮುಂದೆ ಯುವಕರಿಗೆ ಕೂಡ ಯೋಜನೆ ತರುತ್ತೇವೆ ಎಂದು ತಿಳಿಸಿದರು.
ಈಗ ಯಾವುದೇ ಸಮಸ್ಯೆ ಇಲ್ಲ: ಇದೇ ವೇಳೆ ಮಾತನಾಡಿದ ನೂತನ ಪರಿಷತ್ ಸದಸ್ಯ ಸುಧಾಮ್ ದಾಸ್, ಬಹಳ ಸಂತೋಷ ಆಗ್ತಿದೆ. ನನ್ನ ಮೇಲೆ ಭರವಸೆ ಇಟ್ಟು ಪಕ್ಷ ಆಯ್ಕೆ ಮಾಡಿದೆ. ಇದು ಗುರುತರವಾದ ಜವಬ್ದಾರಿ ಅಂತ ಪರಿಗಣಿಸಿದ್ದೇನೆ. ಉನ್ನತ ವ್ಯಕ್ತಿಗಳು ಅಲಂಕರಿಸಿದ ಸ್ಥಾನದಲ್ಲಿ ನನಗೆ ಅವಕಾಶ ಸಿಕ್ಕಿದೆ. ಈ ಸ್ಥಾನಕ್ಕೆ ಸಂಪೂರ್ಣವಾಗಿ ನ್ಯಾಯ ಒದಗಿಸುತ್ತೇನೆ. ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವನ್ನು ಇಲ್ಲಿ ಉಪಯೋಗಿಸಿಕೊಳ್ಳುತ್ತೇನೆ ಎಂದರು. ಕೆಲ ಸಚಿವರು ಅಸಮಾಧಾನ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಇದು ಸಹಜ ಅಲ್ವಾ. ಖಂಡಿತ ಈಗ ಎಲ್ಲರೂ ಆಶೀರ್ವಾದ ಮಾಡಿದ್ದಾರೆ. ಈಗ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಪ್ರಮಾಣವಚನ ಸಮಾರಂಭ ನಡೆಯಿತು. ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಸಿಎಂ ಸಿದ್ದರಾಮಯ್ಯ, ಸಚಿವರುಗಳಾದ ಹೆಚ್.ಕೆ ಪಾಟೀಲ್, ಬೋಸರಾಜು ಸೇರಿದಂತೆ ಹಲವು ಶಾಸಕರುಗಳು ಮತ್ತು ಅವರ ಕುಟುಂಬ ಸದಸ್ಯರು ಅಭಿಮಾನಿಗಳ ಸಮ್ಮುಖದಲ್ಲಿ ನೂತನವಾಗಿ ಆಯ್ಕೆಯಾದ ಮೂವರು ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ಜರುಗಿತು.
ಉಮಾಶ್ರೀ ಅವರು ಸಂವಿಧಾನ ಹಾಗೂ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೇ, ಹೆಚ್ ಪಿ ಸುಧಾಂ ದಾಸ್ ಅವರು ಬಸವ, ಬುದ್ಧ, ಅಂಬೇಡ್ಕರ್ ಹಾಗೂ ಭಗವಂತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ: Jagdish Shettar: ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಬರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ: ಜಗದೀಶ್ ಶೆಟ್ಟರ್