ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ ನೇಕಾರರ 100 ಕೋಟಿ ರೂ. ಸಾಲಮನ್ನಾ, ರೈತ ಫಲಾನುಭವಿಗಳಿಗೆ 2 ಕಂತುಗಳಲ್ಲಿ 4 ಸಾವಿರ ರೂಪಾಯಿ ಧನಸಹಾಯ ಘೋಷಣೆ ಮಾಡಿದ್ದಾರೆ.
ಈ ಮೂಲಕ ತಾವು ರೈತ ನಾಯಕನ ಜೊತೆ ಈ ಸರ್ಕಾರ ಜನಪರವಾಗಿದೆ ಎಂಬ ಸಂದೇಶವನ್ನು ಪರೋಕ್ಷವಾಗಿ ಜನರಿಗೆ ರವಾನಿಸಿದ್ದು, ಸಾಲಮನ್ನಾದ ಕ್ರೆಡಿಟ್ ಪಡೆದುಕೊಂಡಿದ್ದ ಕಾಂಗ್ರೆಸ್-ಜೆಡಿಎಸ್‍ಗೆ ಯಡಿಯೂರಪ್ಪ ನೇರವಾಗಿಯೇ ಸೆಡ್ಡು ಹೊಡೆದಿದ್ದಾರೆ.
ರಾಜಭವನದಲ್ಲಿ ಇಂದು ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಸೌಧದಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ್ ಬಾಸ್ಕರ್ ಜೊತೆ ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದು, ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೊದಲು ಕಾರ್ಗಿಲ್ ಯುದ್ಧವನ್ನು ಗೆದ್ದು, ಅದರಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು.
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಕಾರಣವಾದ ಕನ್ನಡದ ಆರೂವರೆ ಕೋಟಿ ಕನ್ನಡಿಗರಿಗೆ ಕೃತಜ್ಞತೆಗಳು. ನನಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದ್ದು, ರಾಜ್ಯದ ಜನತೆಗೆ ಸಂದ ಗೌರವ. ಈ ಹಿಂದಿನ 14 ತಿಂಗಳ ಸರ್ಕಾರಕ್ಕೂ ಮುಂದೆ ಬರುವ ಸರ್ಕಾರಕ್ಕೂ ಏನು ವ್ಯತ್ಯಾಸ ಎಂಬುದನ್ನು ಮಾಡಿ ತೋರಿಸಬೇಕಿದೆ. ನಾನು ದ್ವೇಷ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ. ಯಾರೇ ದ್ವೇಷ ರಾಜಕಾರಣ ಮಾಡಿದ್ದರೂ ನಾನು ಅದೆಲ್ಲವನ್ನು ಮರೆತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ. ಅಭಿವೃದ್ಧಿಯಡೆಗೆ ಮಾತ್ರ ನನ್ನ ಗಮನ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ರಾಜ್ಯದ ರೈತರಿಗೆ ನನ್ನ ಮೊದಲ ಆದ್ಯತೆ. ಇವರ ಜೊತೆಗೆ ಎಲ್ಲ ಕೆಳವರ್ಗದ ಸಮುದಾಯದ ಜನರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.ಇದಾದ ನಂತರ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ವಾರ್ಷಿಕವಾಗಿ ನೀಡುತ್ತಿದ್ದ 6 ಸಾವಿರ ರೂ. ಧನಸಹಾಯದ ಜತೆಗೆ ಕರ್ನಾಟಕ ಸರ್ಕಾರದ ವತಿಯಿಂದ ರೈತ ಫಲಾನುಭವಿಗಳಿಗೆ 2 ಕಂತುಗಳಲ್ಲಿ 4 ಸಾವಿರ ರೂ. ಧನಸಹಾಯ ನೀಡುವುದಾಗಿ ಘೋಷಿಸಿದರು.
ರೈತರು ಮತ್ತು ನೇಕಾರರು ಈ ರಾಜ್ಯದ ಎರಡು ಕಣ್ಣುಗಳು ಇದ್ದಂತೆ. ರಾಜ್ಯದಲ್ಲಿನ ಸುಮಾರು 100 ಕೋಟಿ ರೂ.ನಷ್ಟು ನೇಕಾರರ ಸಾಲ ಇದೆ. ಅವರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ ಎಂದರು.
ಜು. 29 ರಂದು ಅಧಿವೇಶನ :
ಇದೇ ತಿಂಗಳ 30 ರೊಳಗೆ ವಿತ್ತೀಯ ಮಸೂದೆಯನ್ನು ಅಂಗೀಕರಿಸಬೇಕಿದೆ. ಇಲ್ಲವಾದಲ್ಲಿ ಸರ್ಕಾರಿ ಸಿಬ್ಬಂದಿಗೆ ಸಂಬಳವಾಗುವುದಿಲ್ಲ. ಹೀಗಾಗಿ ಜು.29ರ ಬೆಳಗ್ಗೆ 10 ಗಂಟೆಗೆ ವಿಧಾನಮಂಡಲ ಅಧಿವೇಶನ ಕರೆಯಲಾಗಿದೆ. ಹೀಗಾಗಿ ಈ ಅಧಿವೇಶನದಲ್ಲಿ 29 ರಂದೇ ಬಹುಮತ ಸಾಬೀತುಪಡಿಸುವುದರ ಜತೆಗೆ ಹಣಕಾಸು ಮಸೂದೆಗೆ ಅಂಗೀಕಾರ ಪಡೆದುಕೊಳ್ಳುವುದಾಗಿ ತಿಳಿಸಿದರು.
ಈ ನಡುವೆ ರೈತರ ಸಾಲ ಮನ್ನಾ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಾಲಮನ್ನಾದ ಮಾಹಿತಿ ತರಿಸಿಕೊಂಡು ನೋಡಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತಿಳಿಸುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶಾಸಕರಾದ ಜೆ.ಸಿ. ಮಾಧುಸ್ವಾಮಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಮತ್ತಿತರರು ಇದ್ದರು.