ಬೆಂಗಳೂರು: ನಾಳೆ ಬೆಳಗ್ಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ವರಿಷ್ಠರ ಭೇಟಿಗೆ ನವದೆಹಲಿಗೆ ತೆರಳುತ್ತಿದ್ದಾರೆ. ಆದರೆ ಸಿಎಂಗೂ ಮೊದಲೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ತೆರಳುತ್ತಿದ್ದಾರೆ.
ನಾಳೆ ಬೆಳಗ್ಗೆ 6.10 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನದಲ್ಲಿ ಸಿಎಂ ಬೊಮ್ಮಯಿ ನವದೆಹಲಿಗೆ ತೆರಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಕೆ ಮಾಡಲಿದ್ದಾರೆ. ಈ ವೇಳೆ ಸರ್ಕಾರದ ಆಶಯ, ಸಂಪುಟ ರಚನೆ ಕುರಿತು ಮಾತುಕತೆ ನಡೆಸಲಿದ್ದಾರೆ.
ನಾಳೆ ಸಂಜೆ 7 ಗಂಟೆಗೆ ಕರ್ನಾಟಕ ಭವನದಲ್ಲಿ ಬೊಮ್ಮಯಿ ಸಭೆ ನಡೆಸಲಿದ್ದಾರೆ. ಪಕ್ಷದ ಸಂಸದರು ಹಾಗೂ ಕೇಂದ್ರದ ಸಚಿವರ ಜೊತೆ ನಡೆಯುವ ಸಭೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗಬೇಕಾಗಿರುವ ಕೆಲಸ ಕಾರ್ಯಗಳು, ಬಾಕಿ ಯೋಜನೆಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ.
ಇನ್ನು ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಈಗಾಗಲೇ ಆರ್.ಅಶೋಕ್ ದೆಹಲಿ ತಲುಪಿದ್ದು, ಸಂಜೆ ಸಿಪಿ ಯೋಗೇಶ್ವರ್ ಕೂಡ ದೆಹಲಿಗೆ ತೆರಳಲಿದ್ದಾರೆ. ಬಿಎಲ್ ಸಂತೋಷ್ ಸೇರಿ ವರಿಷ್ಠರ ಭೇಟಿ ಪ್ರಯತ್ನ ನಡೆಸಲಿದ್ದಾರೆ. ಸಿಎಂ ಪ್ರಮಾಣವಚನದ ಬೆನ್ನಲ್ಲೆ ಸಚಿವ ಸ್ಥಾನಕ್ಕೆ ಲಾಬಿ ಆರಂಭಗೊಂಡಿದ್ದು, ಹೈಕಮಾಂಡ್ ಮಟ್ಟದಲ್ಲೂ ಯತ್ನ ನಡೆಯುತ್ತಿದೆ.
ಇದನ್ನೂ ಓದಿ: ಬಿಎಸ್ವೈ ವಿರುದ್ಧ ತೊಡೆತಟ್ಟಿದ್ದ 'ಸೈನಿಕ'ನಿಗೆ ಸಿಗುತ್ತಾ ಸಚಿವ ಸ್ಥಾನ?