ಬೆಂಗಳೂರು: ನೇಪಾಳದಲ್ಲಿ ಪೊಲೀಸ್ ಆಗಿದ್ದ ಆತನನ್ನು ನಡವಳಿಕೆ ಸರಿಯಿಲ್ಲದ ಕಾರಣ ಪೊಲೀಸ್ ಹುದ್ದೆಯಿಂದ ತೆರವುಗೊಳಿಸಲಾಗಿತ್ತು. ಕೆಲಸ ಅರಸಿ ಆತ ದೇಶ ಬಿಟ್ಟು ರಾಜಧಾನಿಗೆ ಬಂದು ಮನೆಯೊಂದರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದನು. ಆದರೆ ಇಲ್ಲಿಯೂ ವಕ್ರಬುದ್ಧಿ ತೋರಿಸಿದ ಈತ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಇದೀಗ ಈ ಖದೀಮನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೇಪಾಳ ಮೂಲದ ತಾಪ ಸೂರ್ಯ ಬಹದ್ದೂರ್ ಬಂಧಿತ ಆರೋಪಿ. ಕಳೆದ 9 ತಿಂಗಳ ಹಿಂದೆ ನಗರಕ್ಕೆ ಬಂದಿದ್ದ. ಈತ ಚಾಮರಾಜಪೇಟೆಯ ನಿವಾಸಿ ಸೆಲ್ವರಾಜ್ ಎಂಬುವರ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ನೇಮಕಗೊಂಡಿದ್ದನು. ಉಳಿದುಕೊಳ್ಳಲು ತಮ್ಮ ಮನೆಯ ನಾಲ್ಕನೇ ಮಹಡಿಯಲ್ಲಿ ರೂಮ್ ನೀಡಿದ್ದರು. ಸೆಲ್ವರಾಜ್ ಪತ್ನಿ ಸರಸ್ವತಿ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ.
ಸಂಬಂಧಿಕರ ನಡುವೆ ಆಸ್ತಿ ಕಲಹ ಹಿನ್ನೆಲೆಯಲ್ಲಿ ಮನೆ ಬಿಡಬೇಕೆಂದು ನ್ಯಾಯಾಲಯ ಸೂಚನೆ ಮೇರೆಗೆ ಉಳಿದುಕೊಂಡಿದ್ದ. ಮನೆ ಬಿಟ್ಟು ಬೇರೆ ಮನೆಯ ಶೋಧ ನಡೆಸುತ್ತಿದ್ದರು. ಇದಕ್ಕಾಗಿ ಕರೂರು ವೈಶ್ಯ ಬಾಂಕ್ನಲ್ಲಿ ಇಟ್ಟಿದ್ದ 50 ಲಕ್ಷ ಬೆಲೆ ಬಾಳುವ ಚಿನ್ನಾಭರಣವನ್ನು ಮನೆಗೆ ಸೆಲ್ವರಾಜ್ ತಂದಿಟ್ಟಿದ್ದರು. ಕಳೆದ ತಿಂಗಳು ಡಿ.25ರಂದು ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ ಇಲ್ಲದಿರುವುದು ಗೊತ್ತಾಗಿದೆ. ಅನುಮಾನದಿಂದ ಪರಿಶೀಲಿಸಿದಾಗ ಸೆಕ್ಯೂರಿಟಿ ಗಾರ್ಡ್ ಕಾಣೆಯಾಗಿರುವುದು ಗೊತ್ತಾಗಿದೆ. ಕೂಡಲೇ ಚಾಮರಾಜಪೇಟೆ ಪೊಲೀಸರಿಗೆ ಸೆಲ್ವರಾಜ್ ದೂರು ನೀಡಿದ್ದರು.
ದೂರಿನ ಮೇರೆಗೆ ಕಳ್ಳತನ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಬಿ.ಎನ್. ಲೋಕಾಪುರ ತಂಡ ಪ್ರಾಥಮಿಕ ತನಿಖೆ ನಡೆಸಿದಾಗ ಭದ್ರತಾ ಸಿಬ್ಬಂದಿ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಈತ ಬಳಸುತ್ತಿದ್ದ ಮೊಬೈಲ್ನ ಒಳಬರುವ ಕರೆ (ಸಿಡಿಆರ್) ಪರಿಶೀಲಿಸಿದಾಗ ಆರೋಪಿಯು ಬೆಂಗಳೂರಿನಿಂದ ದೆಹಲಿ - ಗೋರಖ್‌ಪುರ ಮಾರ್ಗವಾಗಿ ನೇಪಾಳದಲ್ಲಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದರು.
ಆರೋಪಿಯ ಸ್ನೇಹಿತನಾಗಿ ರಾಜಾಜಿನಗರದಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್ನನ್ನು ಪತ್ತೆ ಹಚ್ಚಿದಾಗ ಆರೋಪಿಯ ವಿಳಾಸ ನೀಡಿದ್ದ. ಬಳಿಕ ದೆಹಲಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ನಗರ ಪೊಲೀಸರು ಪತ್ರ ವ್ಯವಹಾರ ನಡೆಸಿದ್ದರು. ಅಲ್ಲಿಂದ ಇಂಟರ್ ಪೋಲ್ ಮೂಲಕ ನೇಪಾಳ ಪೊಲೀಸರ ಗಮನಕ್ಕೆ ತಂದಿದ್ದರು. ಬಳಿಕ ಕಠ್ಮಂಡುವಿನ ರಾಮೇಛಾಪ್ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಹಸ್ತಾಂತರಿಸಿದ್ದರು. ಸದ್ಯ ಆರೋಪಿಯಿಂದ 1,152 ಗ್ರಾಂ ಚಿನ್ನವನ್ನು ಜಪ್ತಿ ಮಾಡಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.