ನೆಲಮಂಗಲ: ಕೈಗಾರಿಕಾ ಉದ್ದೇಶಕ್ಕೆಂದು ರೈತರಿಂದ ಜಮೀನು ಸ್ವಾಧೀನ ಪಡಿಸಿಕೊಂಡಿದ್ದ ಖಾಸಗಿ ಕಂಪನಿ, ನಂತರ ರೈತರ ಜಮೀನಿಗೆ ಪರಿಹಾರ ನೀಡದೆ ಕೈತೊಳೆದುಕೊಂಡಿದೆ. ಇದೀಗ ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾಡಲು ಮುಂದಾಗಿದೆ ಎಂದು ಆರೋಪಿಸಿ ಕಂಪನಿ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.
ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯ 118 ಎಕರೆ ಭೂಮಿ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಈ ಭೂಮಿ 1937ಕ್ಕೂ ಮುಂಚೆ ಅಂದಿನ ಮೈಸೂರು ರಾಜ್ಯದಲ್ಲಿ ರೈತರು ಪಡೆದುಕೊಂಡಿರುತ್ತಾರೆ. ಮೈಸೂರು ಸರ್ಕಾರ ಮೈಸೂರು ಸ್ಟೋನ್‌ವೇರ್ ಪೈಪ್ಸ್ ಅಂಡ್ ಪಾಟರೀಸ್ ಎನ್ನುವ ಕಂಪನಿಗೆ ಕೈಗಾರಿಕಾ ಉದ್ದೇಶಕ್ಕೆಂದು ಭೂಮಿ ಸ್ವಾಧೀನಪಡಿಸಿಕೊಳ್ಳಲು ಆದೇಶ ನೀಡುತ್ತದೆ. ಆದ್ರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದು 5 ವರ್ಷಗಳು ಕಳೆದರೂ ಕೂಡ ಎಂಎಸ್‌ಪಿಪಿ ಸಂಸ್ಥೆಯು ರೈತರಿಗೆ ಒಂದು ರೂಪಾಯಿ ಪರಿಹಾರದ ಹಣ ನೀಡಿರುವುದಿಲ್ಲ. ಹಾಗಾಗಿ ಸರ್ಕಾರ ಸ್ವಾಧೀನ ಪ್ರಕ್ರಿಯೆಯನ್ನು 1941ರಲ್ಲಿ ವಜಾಗೊಳಿಸಿ ಅದೇಶ ಹೊರಡಿಸಿತ್ತು.
ಭೂ ಸ್ವಾಧೀನ ಪ್ರಕ್ರಿಯೆ ವಜಾಗೊಂಡ ನಂತರ ಹಳೇ ಆದೇಶ ಪ್ರತಿಯನ್ನೇ ಇಟ್ಟುಕೊಂಡು ಸರ್ಕಾರದ ದಿಕ್ಕು ತಪ್ಪಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮೈನಿಂಗ್ ಮಾಡಲು 1978ರಲ್ಲಿ 20 ವರ್ಷಗಳ ಕಾಲ ಗುತ್ತಿಗೆಗೆ ಭೂಮಿಯನ್ನು ಕಂಪನಿ ಪಡೆಯುತ್ತದೆ. 1998ರಲ್ಲಿ ಮೈನಿಂಗ್ ಗುತ್ತಿಗೆ ರದ್ದಾಗಿದ್ದು, ಈ ಮೈನಿಂಗ್ ಸಂಸ್ಥೆಯೇ ನಕಲಿ ಎಂದು 2013ರಲ್ಲಿ ಕರ್ನಾಟಕ ರಾಜ್ಯ ಪತ್ರ ಆದೇಶ ಹೊರಡಿಸಿದೆ. ಸರ್ಕಾರದ ದಿಕ್ಕು ತಪ್ಪಿಸಿ ಇಷ್ಟೆಲ್ಲಾ ಮಾಡಿದ್ದಲ್ಲದೇ ಎಂಎಸ್‌ಪಿಪಿ ಸಂಸ್ಥೆಯು ಬಿಡಿಎ ಹಾಗೂ ಜಿಲ್ಲಾಧಿಕಾರಿಗಳ ಹಿಂಬರಹ ಪ್ರತಿಯನ್ನು ಇಟ್ಟುಕೊಂಡು ಅಕ್ರಮವಾಗಿ ವಶಕ್ಕೆ ಪಡೆದಿರುವ ಭೂಮಿಯಲ್ಲಿ ಬಡಾವಣೆ ನಿರ್ಮಾಣ ಮಾಡಿ ಮಾರಾಟ ಮಾಡಲು ಮುಂದಾಗಿದ್ದು, ಈ ಕುರಿತು ನೊಂದ ರೈತರು, ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಬೆಂಗಳೂರು ಉತ್ತರ ವಿಭಾದವರಿಗೆ ದೂರು ಸಹ ನೀಡಿದ್ದಾರೆ. ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ನ್ಯಾಯಾಲಯದಲ್ಲಿ ಪ್ರಕರಣ ಬಗೆಹರಿಸಿಕೊಳ್ಳಿ ಎಂದು ಪೊಲೀಸರು ಹೇಳಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಈ ಸುದ್ದಿಯನ್ನೂ ಓದಿ: ಚೆಕ್ ಡ್ಯಾಂ ನಿರ್ಮಾಣದಲ್ಲಿ ಹಣ ರ್ದುಬಳಕೆ: 7 ಎಂಜಿನಿಯರ್ಗಳ ವಿರುದ್ಧ ಎಫ್ಐಆರ್
ಒಟ್ಟಾರೆ ಖಾಸಗಿ ಕಂಪನಿಯೊಂದು ರೈತರ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದು, ತಲೆಮಾರುಗಳು ಕಳೆದರೂ ಕೂಡ ರೈತರೆಡೆಗೆ ಗಮನ ಹರಿಸುವವರಿಲ್ಲ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ನ್ಯಾಯ ಸಿಗುವಂತೆ ಸಹಾಯ ಮಾಡಬೇಕಿದೆ.