ಬೆಂಗಳೂರು: ಯಾವುದೇ ಸರ್ಕಾರದ ಕಾರ್ಯವೈಖರಿಯನ್ನು ಐದು ಮಾನದಂಡಗಳ ಮೇಲೆ ನಿರ್ಧರಿಸಲಾಗುವುದು. ಆದರೆ ಎನ್‌ಡಿಎ ಸರ್ಕಾರ ಈ ಎಲ್ಲಾ ಮಾನದಂಡವನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಮನೀಶ್ ತಿವಾರಿ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮೊದಲನೆಯದು ಹೊರದೇಶಗಳಿಂದ ಭಾರತದ ಭದ್ರತೆ. ಎರಡನೆಯದು ದೇಶದ ಆರ್ಥಿಕತೆ, ಮೂರನೇಯದು ಸಾಮಾಜಿಕ ಭದ್ರತೆ, ನಾಲ್ಕನೆಯದು ಆಂತರಿಕ ಭದ್ರತೆ ಹಾಗೂ ಐದನೆಯದು ಭಾರತದ ವಿದೇಶಾಂಗ ನೀತಿ. ಈ ಎಲ್ಲ ವಿಚಾರಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇಂದು ಭಾರತವು ಹಿಂದೆಂದಿಗಿಂತಲೂ ಬಾಹ್ಯ ಶಕ್ತಿಗಳಿಂದ ಭದ್ರತೆಯ ಸವಾಲನ್ನು ಎದುರಿಸುತ್ತಿದೆ ಎಂದಿದ್ದಾರೆ.
ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಚೀನಾದ ಪೀಪಲ್ ಲಿಬರೇಷನ್ ಆರ್ಮಿಯು ಭಾರತದ ನೆಲವನ್ನು ಅತಿಕ್ರಮಣ ಮಾಡುತ್ತಿದ್ದು, ನಮ್ಮ ನೆಲದಿಂದ ಅವರು ಜಾಗ ಖಾಲಿ ಮಾಡಿಲ್ಲ. ಯಾವುದೇ ದೇಶದ ಆರ್ಥಿಕತೆ ಅಭಿವೃದ್ಧಿಯಾಗಬೇಕಾದರೆ ಆ ದೇಶದ ಸುಮಾರು 60% ಜನರು ಉದ್ಯೋಗ ಹೊಂದಿರಬೇಕು. ನಮ್ಮ ದೇಶದಲ್ಲಿ 140 ಕೋಟಿ ಜನರು ಇದ್ದು ಅದರಲ್ಲಿ ಕನಿಷ್ಠ 80 ಕೋಟಿ ಜನರು ಉದ್ಯೋಗವನ್ನು ಹೊಂದಿರಬೇಕು. ಆದರೆ ದೇಶದಲ್ಲಿ ಉದ್ಯೋಗ ಹೊಂದಿರುವವರ ಸಂಖ್ಯೆ ಕೇವಲ 40 ಕೋಟಿ ಮಾತ್ರ. ಈ ಸರ್ಕಾರ ಉದ್ಯೋಗ ಸೃಷ್ಟಿಸಲು ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ. 2023ರ ಈ ಪ್ರೀತಿಗಳ ವರೆಗಿನ ನಿರುದ್ಯೋಗ ಪ್ರಮಾಣ 8.11% ನಷ್ಟಿದೆ.
ದೇಶದ ಆರ್ಥಿಕ ಅಸಮಾನತೆ ಪ್ರಮಾಣವು ಎಷ್ಟಿದೆ ಎಂದರೆ ದೇಶದ 98 ಜನ ಶ್ರೀಮಂತರು, ದೇಶದ ಉಳಿದ 55 ಕೋಟಿ ಜನರ ಬಳಿ ಇರುವಷ್ಟು ಆಸ್ತಿಯನ್ನು ಹೊಂದಿದ್ದಾರೆ. ಕಳೆದ 9 ವರ್ಷಗಳಲ್ಲಿ ಸರ್ಕಾರದ ಶ್ರೀಮಂತರ ಸ್ನೇಹಿತರ ಆಸ್ತಿ ಹೆಚ್ಚಾಗಿದೇಯೆ ಹೊರತು, ಜನಸಾಮಾನ್ಯರ ಆಸ್ತಿ ಪ್ರಮಾಣ ಹೆಚ್ಚಾಗಿಲ್ಲ. ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿತ್ತು ಈಗ ಗೃಹ ಸಚಿವರು ಮಣಿಪುರಕ್ಕೆ ಭೇಟಿ ನೀಡುವ ಮನಸು ಮಾಡಿದ್ದಾರೆ. 2015ರಲ್ಲಿ ಕೈಗೊಂಡ ನಾಗಾಲ್ಯಾಂಡ್ ಒಪ್ಪಂದ ಏನಾಯ್ತು ಎಂದು ಯಾರಿಗೂ ಗೊತ್ತಿಲ್ಲ. ಜಮ್ಮು ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ರಾಜ್ಯವನ್ನಾಗಿ 2019ರಲ್ಲಿ ಮಾಡಿದ್ದಾರೆ. ಆದಷ್ಟು ಬೇಗ ಚುನಾವಣೆ ನಡೆಸಲಾಗುವುದು ಎಂದು ಭರವಸೆ ನೀಡಿ ಇದುವರೆಗೂ ಅಲ್ಲಿ ಚುನಾವಣೆ ನಡೆಸಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಸರಿಯಾದ ಉತ್ತರ ತೆಗೆದುಕೊಂಡಿದ್ದೆ, ಆಗಿದ್ದಲ್ಲಿ ಅವರು ಚುನಾವಣೆ ನಡೆಸಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ? 2014ರಿಂದ 2019ರವರೆಗೆ ಬಿಜೆಪಿಯು ಯಾವುದೇ ರಾಜ್ಯಗಳಲ್ಲಿ ತನ್ನ ಅಭಿವೃದ್ಧಿಯ ಕೆಲಸದ ಆಧಾರದ ಮೇಲೆ ಚುನಾವಣೆ ನಡೆಸಿಲ್ಲ. ಅದಕ್ಕೆ ಉದಾಹರಣೆ ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣೆ. ದೇಶದಲ್ಲಿ ಕೋಮು ಸಂಘರ್ಷ ಕಾವು ಸದಾ ಇರುವಂತೆ ನೋಡಿಕೊಳ್ಳಲು ಬಿಜೆಪಿ ಸರ್ಕಾರ ಬಯಸುತ್ತದೆ. ಆ ಮೂಲಕ ವಿಭಜನೆ ರಾಜಕೀಯ ಮಾಡಿ ಬಿಜೆಪಿ ಸರ್ಕಾರ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಇದು ದೇಶಕ್ಕೆ ಮಾರಕವಾದ ವಿಚಾರ. ಇನ್ನು ವಿದೇಶಾಂಗ ನೀತಿ ವಿಚಾರಕ್ಕೆ ಬರುವುದಾದರೆ, ವಿದೇಶಾಂಗ ಸಚಿವ ಜಯಶಂಕರ್ ಅವರಿಗೆ ಕೇವಲ ಮೂರು ಪ್ರಶ್ನೆಗಳನ್ನು ಕೇಳ ಬಯಸುತ್ತೇನೆ ಎಂದರು.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಪಡೆಯಲು ಕಳೆದ ಏಳು ವರ್ಷಗಳಿಂದ ಯಾವುದೇ ಪ್ರಯತ್ನ ನಡೆದಿಲ್ಲ ಯಾಕೆ? ಅಣ್ವಸ್ತ್ರ ಸರಬರಾಜು ಸಮೂಹದಲ್ಲಿ ಭಾರತ ಸದಸ್ಯತ್ವ ಪಡೆಯಲು ಸಾಧ್ಯವಾಗಿಲ್ಲ ಯಾಕೆ? 2018 ರಿಂದ ಇಲ್ಲಿಯವರೆಗೂ ಭಾರತದಲ್ಲಿ ಸಾರ್ಕ್ ಸಮಾವೇಶ ನಡೆದಿಲ್ಲ ಯಾಕೆ? ಭಾರತದ ನೆರೆ ರಾಷ್ಟ್ರಗಳಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಪ್ರತಿಯಾಗಿ ಭಾರತದ ಪ್ರತಿ ತಂತ್ರಗಳು ರೂಪಿಸಲಾಗುತ್ತಿಲ್ಲ ಯಾಕೆ? ಈ ಸರ್ಕಾರ ಸುಳ್ಳು ವೈಭವೀಕರಣ ಪ್ರಚಾರದ ಹೊರತಾಗಿ ಉಳಿದ ಯಾವುದೇ ಸಾಧನೆ ಮಾಡಿಲ್ಲ. ಹೀಗಾಗಿ ಕರ್ನಾಟಕ ರಾಜ್ಯವು ತನ್ನ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ತಮ್ಮ ಆಯ್ಕೆ ಮಾಡಿದೆ. ಇದೇ ರೀತಿ ದೇಶದ ಜನರು ಕೂಡ 2024ರ ಚುನಾವಣೆಯಲ್ಲಿ ದೇಶದ ಹಿತದೃಷ್ಟಿಯಿಂದ ಬಹಳ ಬುದ್ಧಿವಂತಿಕೆಯಿಂದ ಸರ್ಕಾರವನ್ನು ಆರಿಸಬೇಕಿದೆ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ನೀರಾವರಿ ಇಲಾಖೆ ಭ್ರಷ್ಟಾಚಾರ ಬಗ್ಗೆ ಬಿಜೆಪಿ ಶಾಸಕರು ಆಡಿದ ಮಾತುಗಳು ನನ್ನ ಕಿವಿಯಲ್ಲಿದೆ: ಡಿಕೆಶಿ