ಬೆಂಗಳೂರು :ಎನ್‌ಸಿಬಿ ಅಧಿಕಾರಿಗಳು ಬೀದರ್ ಮತ್ತು ಹೈದರಾಬಾದ್ನಲ್ಲಿರುವ ಅಕ್ರಮ ಆಲ್ಪಾಜೋಲಮ್ ಡ್ರಗ್ ತಯಾರಿಕಾ ಮತ್ತು ಕಳ್ಳಸಾಗಣೆ ಘಟಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ 91. 5 ಕೆಜಿ ಆಲ್ಪಾಜೋಲಮ್ ಡ್ರಗ್ ಪೌಡರ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ದಂಧೆಯ ಸೂತ್ರಧಾರ ಸೇರಿದಂತೆ ಐವರನ್ನು ಎನ್‌ಸಿಬಿ ಅಧಿಕಾರಿಗಳು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ. ಎನ್‌ಸಿಬಿ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ದಾಳಿ ನಡೆಸಿದೆ ಎಂದು ಬೆಂಗಳೂರು ವಲಯ ನಿರ್ದೇಶಕ ಅಮಿತ್ ಗವಾಟೆ ತಿಳಿಸಿದ್ದಾರೆ.
ಬೀದರ್‌ನಿಂದ ಕೋಲಾರಕ್ಕೆ ತೆರಳುತ್ತಿದ್ದ ಮಿನಿ ಟ್ರಕ್ ಅನ್ನು ಎನ್‌ಸಿಬಿ ಅಧಿಕಾರಿಗಳು ತಡೆದು ವಿಚಾರಣೆ ನಡೆಸಿದಾಗ, ಚಾಲಕ ಬೀದರ್ ಮೂಲದ ಇಂದೂ ಡ್ರಗ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ತಯಾರಿಸಿದ ಆಲ್ಪಾಜೋಲಮ್ ಡ್ರಗ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎಂಬುದು ತಿಳಿದು ಬಂದಿದೆ. ತನಿಖೆ ನಡೆಸುವ ವೇಳೆ, ಕಾರ್ಖಾನೆಯ ಉತ್ಪಾದನಾ ಸಾಧನಗಳಲ್ಲಿ ಆಲ್ಪಾಜೋಲಮ್ ಡ್ರಗ್ ಪುಡಿ ಕೂಡ ಸಿಕ್ಕಿದೆ.
ಇನ್ನು ಏಕಕಾಲದಲ್ಲಿ ಎನ್‌ಸಿಬಿ ಅಧಿಕಾರಿಗಳು ಬೀದರ್ ಮತ್ತು ಪ್ರಕರಣದ ಮೂಲ ಆರೋಪಿಯಾದ ಎನ್.ವಿ. ರೆಡ್ಡಿಯ ಹೈದರಾಬಾದ್ ನಿವಾಸದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, ಈ ದಾಳಿ ವೇಳೆ 62 ಲಕ್ಷ ನಗದನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿ ಅಕ್ರಮವಾಗಿ ಆಲ್ಪಾಜೋಲಮ್ ಡ್ರಗ್ ಕಾರ್ಖಾನೆಯನ್ನು ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಎನ್.ವಿ. ರೆಡ್ಡಿ ಈ ಡ್ರಗ್ ತಯಾರಿಸಲು ಎಸ್. ಭಾಸ್ಕರ್ ಮತ್ತು ವೈ.ವಿ ರೆಡ್ಡಿಗೆ ತರಬೇತಿ ನೀಡುತ್ತಿದ್ದ. ಈ ಇಬ್ಬರೂ ಆರೋಪಿಗಳು ದಾಳಿ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಆರೋಪಿ ಭಾಸ್ಕರ ತನ್ನ ಕಾರಿನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.. ಕೂಡಲೇ ಎನ್‌ಸಿಬಿ ಅಧಿಕಾರಿಗಳು ಬೆನ್ನಟ್ಟಿ ಆತನನ್ನು ಬಂಧಿಸಿದ್ದಾರೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದರು.
ಈ ದಾಳಿ ವೇಳೆ ಒಟ್ಟು ಐವರು ಆರೋಪಿಗಳಾದ ಎಸ್.ಭಾಸ್ಕರ್, ವೈ.ವಿ. ರೆಡ್ಡಿ, ಎಸ್. ಮೀನಾನ್, ಅಮೃತ್ ಮತ್ತು ಎನ್.ವಿ.ರೆಡ್ಡಿ ತೆಲಂಗಾಣದಲ್ಲಿ ಬಂಧಿಸಲಾಗಿದೆ. ಇನ್ನು ತನಿಖೆ ವೇಳೆ ಆಲ್ಪಾಜೋಲಮ್ ಡ್ರಗ್ ಅನ್ನು ರಾಜ್ಯದಲ್ಲಿ ಮಾರಾಟ ಮಾಡಲು ಮುಂದಾಗಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಎನ್‌ಸಿಬಿ ಅಧಿಕಾರಿ ಅಮಿತ್ ಗವಾಟೆ ನೀಡಿರುವ ಮಾಹಿತಿ ಪ್ರಕಾರ, ತೆಲಂಗಾಣದಲ್ಲಿ ಆಲ್ಪಾಜೋಲಮ್ ಡ್ರಗ್‌ನ ಅಕ್ರಮ ಉತ್ಪಾದನೆ ಮತ್ತು ಕಳ್ಳಸಾಗಣೆ ಮಾಡುವ ಕಾನೂನು ಬಾಹಿರ ಸಂಸ್ಥೆಗಳಿವೆ. ಆಲ್ಪಾಜೋಲಮ್ ಬೆಂಜೊಡಿಯಜೆಪೈನ್ಸ್ ವರ್ಗಕ್ಕೆ ಸೇರಿದ ಸೈಕೋಟ್ರೋಪಿಕ್ ವಸ್ತುವಾಗಿದ್ದು, ಇದನ್ನು ಆತಂಕ, ನಿದ್ರಾಹೀನತೆ ಮತ್ತು ಇತರ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದನ್ನ ಕಾನೂನು ಬಾಹಿರವಾಗಿ ಮನರಂಜನಾ ಔಷಧವಾಗಿಯೂ ಬಳಸಲಾಗುತ್ತದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ, ಆಲ್ಪಾಜೋಲಮ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಡ್ರಗ್ ಅಡ್ಡೆ ಮೇಲೆ ಎನ್‌ಸಿಬಿ ಅಧಿಕಾರಿಗಳ ದಾಳಿ: 6 ಮಂದಿಯ ಬಂಧನ