ಬೆಂಗಳೂರು: ಡಿ ಜೆ ಹಳ್ಳಿ ಹಾಗೂ ಕೆ ಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಗಲಭೆ ಪ್ರಕರಣದ ಆರೋಪಿ ನವೀನ್ ವಿಚಾರಣಾಧಿಕಾರಿಗಳ ಮುಂದೆ ಕ್ಷಮೆಯಾಚಿಸಿದ್ದಾನೆ. ನನಗೆ ಮದುವೆ ಆಗಿ ಮೂರು ತಿಂಗಳಷ್ಟೇ ಆಗಿದೆ ಸಾರ್, ತಪ್ಪಾಗಿದೆ ಕ್ಷಮೆ ಇರಲಿ ಎಂದು ತನಿಖಾಧಿಕಾರಿ ಮುಂದೆ ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಕಿಡಿಗೇಡಿಗಳು ನವೀನ್ ಹಲ್ಲೆ ನಡೆಸುವ ಸಾಧ್ಯತೆ ಇರುವುದರಿಂದ ಸದ್ಯ ಪೊಲೀಸರು ನವೀನ್ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಹೀಗಾಗಿ ಸದ್ಯ ಪೊಲೀಸರ ಭದ್ರತೆಯಲ್ಲಿ ತನಿಖೆ ಮುಂದುವರೆದಿದೆ.
ಕಳೆದ ಮಂಗಳವಾರ ನವೀನ್ ಡಿ ಜೆ ಹಳ್ಳಿ ಠಾಣಾ ವ್ಯಾಪ್ತಿಯ ಬಳಿ ಇರುವ ಮನೆಯಲ್ಲಿ ಫೇಸ್ ಬುಕ್ ಆನ್ ಮಾಡಿರ್ತಾನೆ. ಬಂಧಿತನಾಗಿರುವ ಎಸ್ಡಿಪಿಐ ಸಂಘಟನೆಯ ಮುಜಾಮಿಲ್ ಹಾಗೂ ಈತನ ಆಪ್ತ ಫೈರೋಜ್ ಜೊತೆ ನವೀನ್ ಜಿದ್ದಾಜಿದ್ದಿ ನಡೆಸುತ್ತಿದ್ದ. ಫೇಸ್ ಬುಕ್ನಲ್ಲಿ ಫೈರೋಜ್ ಹಾಕಿದ್ದ ಪೋಸ್ಟ್ಗೆ ಕಾಮೆಂಟ್ ಮಾಡುವ ಭರದಲ್ಲಿ ನವೀನ್ ಮೊಬೈಲ್ನಲ್ಲಿದ್ದ ಸ್ಕ್ರೀನ್ ಶಾಟ್ ಹಾಕಿದ್ದ. ಇದನ್ನು ನೋಡಿದ್ದ ಜನ ಆತನಿಗೆ ಅಸಭ್ಯವಾಗಿ ಕಮೆಂಟ್ ಮಾಡಿದ್ದರು. ಪೋಸ್ಟ್ ನೋಡಿದ್ದ ಕೆಲ ಅನ್ಯಕೋಮಿನ ಜನ ಕರೆ ಮಾಡಿ ಕೊಲ್ಲುವ ಬೆದರಿಕೆ ಹಾಕಿದ್ದರಂತೆ. ವಿಷಯ ತಿಳಿದ ಪೊಲೀಸರು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಕರೆ ಮಾಡಿ ಮೊದಲು ನೀವು ಅಲರ್ಟ್ ಆಗಿ ಎಂದಿದ್ದರು. ಗಲಭೆಕೋರರು ಬರುತ್ತಾರೆ ಎಂದು ತಿಳಿದು ಮನೆಯ ಮೂರನೇ ಮಹಡಿಯಲ್ಲಿ ನವೀನ್ ಅಡಗಿ ಕುಳಿತಿದ್ದ. ಈ ವೇಳೆ ಪೊಲೀಸರು ನಾವಿದ್ದೇವೆ, ನಮ್ಮ ಜೊತೆ ಬಾ ಎಂದು ಕೆ ಜಿ ಹಳ್ಳಿ ಠಾಣೆಗೆ ಕರೆ ತಂದಿದ್ದರು ಎನ್ನಲಾಗ್ತಿದೆ.