ಬೆಂಗಳೂರು : ಪ್ರಜಾಪ್ರಭುತ್ವದ ಮೂಲ ಆಶಯಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಲ್ಲಿ ಸಂವಿಧಾನಬದ್ಧವಾಗಿರುವ ಶಾಸನ ಸಭೆಗಳ ಪಾತ್ರ ಮಹತ್ವದ್ದು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು. ಮುಂಬೈನ ಜಿಯೋವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ಪ್ರಪ್ರಥಮ ರಾಷ್ಟೀಯ ಶಾಸಕರ ಸಮ್ಮೇಳನ ನಡೆಯುತ್ತಿದ್ದು, ಉದ್ಘಾಟನಾ ಸಮಾರಂಭದ ಬಳಿಕ ನಡೆದ ವಿಶೇಷ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
75 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವಮಾನ್ಯವಾಗಿದೆ. ಇಂತಹ ಶ್ರೇಷ್ಠತೆಯ ಮೌಲ್ಯವುಳ್ಳ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿ ಗೊಳಿಸುವಲ್ಲಿ ಶಾಸನಸಭೆಗಳು ಕ್ರಿಯಾಶೀಲ ಹಾಗೂ ಸಮರ್ಪಕವಾಗಿ ಕೆಲಸ ಮಾಡಬೇಕು. ಸದನಗಳು ಕೇವಲ ಮಾತಿನ ಮಂಟಪ ಸೃಷ್ಟಿಸುವ ವೇದಿಕೆಗಳಾಗದೆ ಜನರ ಬದುಕು, ಬವಣೆ ಹಾಗೂ ಸಂಕಷ್ಠಗಳಿಗೆ ಸೂಕ್ತ ಪರಿಹಾರ ಒದಗಿಸಬಲ್ಲ ವೇದಿಕೆಯಾಗಬೇಕು. ಶಾಸನಸಭೆಗಳು ಜನಸ್ನೇಹಿಯಾಗಿ ಪ್ರಜಾಪ್ರಭುತ್ವದ ಅಡಿಪಾಯವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಚಿಂತನ- ಮಂಥನ ನಡೆಸುವ ಕೇಂದ್ರಗಳಾಗಬೇಕು.
ಜಾತಿ, ಮತ, ಪಂಥ ಹಾಗೂ ರಾಜಕೀಯ ಪಕ್ಷಗಳ ಮಾನಸಿಕತೆಯಿಂದ ಮೇಲೆದ್ದು ಜನಪರ ಚಿಂತನೆ ನಡೆಸುವ ತಾಣಗಳಾದಾಗ ಮಾತ್ರ ಪ್ರಜಾಪ್ರಭುತ್ವ ನೈಜ ರೂಪದಲ್ಲಿ ಸಾರ್ಥಕಗೊಳ್ಳುತ್ತದೆ. ಈ ನಿಟ್ಟಿನಲ್ಲಿ ದೇಶದ ಎಲ್ಲ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರು, ಪೀಠಾಸೀನಾಧಿಕಾರಿಗಳು ಹಾಗೂ ಸಂಸದೀಯ ಪಟುಗಳು ಒಗ್ಗೂಡಿ ಚಿಂತನೆ ನಡೆಸುವ ಅಗತ್ಯತೆ ಇದೀಗ ಹೆಚ್ಚಾಗಿದೆ. ಇಂತಹ ಚಿಂತನೆಗಳಿಗೆ ಈ ಸಮಾವೇಶ ಸೂಕ್ತ ವೇದಿಕೆ ಒದಗಿಸಿದೆ ಎಂದು ಹೊರಟ್ಟಿ ಹೇಳಿದರು.
ಆರ್ಥಿಕ ಸಬಲೀಕರಣಕ್ಕೆ ತಂತ್ರಜ್ಞಾನದ ಸದ್ಭಳಕೆಯ ಅವಶ್ಯಕತೆಯನ್ನು ಪ್ರತಿಪಾದಿಸಿದ ಬಸವರಾಜ ಹೊರಟ್ಟಿ, ಇಂದಿನ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅತಿ ಹೆಚ್ಚಿನ ಸವಲತ್ತುಗಳನ್ನು ಸಾಮಾನ್ಯ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುಂದಾಗಬೇಕು. ಶಾಸನಸಭೆಗಳಲ್ಲಿ ಕೇವಲ ಕಾಲಹರಣ ಮಾಡದೇ ಸಕಾರಾತ್ಮಕ ಚಿಂತನೆಗಳಿಗೆ ಒತ್ತು ನೀಡಿ ಜನರ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಹಾಗೂ ದೇಶದ ಅಭಿವೃದ್ದಿ ವಿಷಯಗಳ ಕುರಿತ ಚಿಂತನೆಗೆ ಆದ್ಯತೆ ನೀಡಬೇಕು. ತಮ್ಮನ್ನು ಆರಿಸಿ ಕಳುಹಿಸಿದ ಮತದಾರರ ಆಶಯಗಳಿಗೆ ಅನುಗುಣವಾಗಿ ಬದ್ಧತೆಯಿಂದ ಕೆಲಸ ಮಾಡುವ ಮನೋಭಾವವನ್ನು ಪಕ್ಷಬೇಧ ಮರೆತು ಎಲ್ಲ ಜನಪ್ರತಿನಿಧಿಗಳು ಬೆಳೆಸಿಕೊಂಡಾಗ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ರಾಜಕೀಯ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಟೀಕೆಗಳು ಕೇಳಿ ಬರುತ್ತಿರುವುದು ವಿಷಾದದ ಸಂಗತಿ. ಪ್ರಜಾಪ್ರಭುತ್ವ ಸದೃಢಗೊಳಿಸುವಲ್ಲಿ ಹಾಗೂ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಶಾಸನ ಸಭೆಗಳು ಪೂರಕವಾಗಿ ಸಮಾಜಮುಖಿ ಚಿಂತನೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವುದು ಅಗತ್ಯ. ಇಂತಹ ಸಮ್ಮೇಳನಗಳು ಪ್ರಜಾಪ್ರಭುತ್ವದ ಮೌಲ್ಯಗಳ ಬಲವರ್ಧನೆಗೆ ಪೂರಕವಾಗಿದ್ದು, ಎಲ್ಲ ಶಾಸಕರು ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವಂತೆ ಹೊರಟ್ಟಿ ಕರೆ ನೀಡಿದರು.
ಇದಕ್ಕೂ ಮೊದಲು ನಡೆದ ಸಮ್ಮೇಳನದ ಉದ್ಛಾಟನಾ ಸಮಾರಂಭದಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಮಹಾರಾಷ್ಟದ ಉಪಮುಖ್ಯಮಂತ್ರಿ ದೇವೆೇಂದ್ರ ಫಡ್ನವೀಸ್, ಲೋಕಸಭೆಯ ಮಾಜಿ ಸಭಾಧ್ಯಕ್ಷ ಸುಮಿತ್ರಾ ಮಹಾಜನ್ ಡಾ.ಮೀರಾ ಕುಮಾರ್ ಶಿವರಾಜ್ ಪಾಟೀಲ್, ಡಾ. ಮನೋಹರ್ ಜೋಷಿ ಸೇರಿದಂತೆ ದೇಶದ ಪ್ರಮುಖ ಸಂಸದೀಯಪಟುಗಳು ಪಾಲ್ಗೊಂಡಿದ್ದರು. ರಾಜ್ಯದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ವಿಧಾನಸಭೆಯ ಸಭಾಧ್ಯಕ್ಷರುಗಳು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಹಾಗೂ ದೇಶದ ಎಲ್ಲ ರಾಜ್ಯಗಳ 2200ಕ್ಕೂ ಹೆಚ್ಚು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಶಾಸಕರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಜೂನ್ 17, ಶನಿವಾರ (ನಾಳೆ) ಸಮ್ಮೇಳನದ ಕೊನೆಯ ದಿನವಾಗಿದ್ದು ವಿವಿಧ ಗೋಷ್ಠಿಗಳು, ಚರ್ಚೆ, ಚಿಂತನ- ಮಂಥನ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮಗಳು ಹಾಗೂ ಸಮಾರೋಪ ನಡೆಯಲಿದೆ.
ಇದನ್ನೂ ಓದಿ : ಶಾಸಕರ ಆಸ್ತಿ ವಿವರ ಸಲ್ಲಿಕೆಗೆ ಜೂನ್ 30 ಗಡುವು: ಸಲ್ಲಿಸದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ ಲೋಕಾಯುಕ್ತರು