ಬೆಂಗಳೂರು: ಆಹಾರ ಭದ್ರತೆ, ಅಂಗನವಾಡಿ ಕೇಂದ್ರಗಳ ನಿರ್ವಹಣೆ ಹಾಗೂ ಪಡಿತರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾನೂನು ವಿವಿಯ 'ಮಗು ಮತ್ತು ಕಾನೂನು' ವಿಭಾಗ ಸಲ್ಲಿಸಿರುವ ವರದಿ ಸುಳ್ಳು ಎಂದು ಸರ್ಕಾರ ಹೈಕೋರ್ಟ್ಗೆ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಕಾನೂನು ವಿವಿಯ 'ಕಾನೂನು ಮತ್ತು ಮಗು' ವಿಭಾಗ ರಾಜ್ಯದ ಕೆಲವೆಡೆ ಸಮೀಕ್ಷೆ ನಡೆಸಿ ಜನರಿಗೆ ಸೂಕ್ತ ರೀತಿಯಲ್ಲಿ ಪಡಿತರ ತಲುಪುತ್ತಿಲ್ಲ. ಹಾಗೆಯೇ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಿಂದಲೂ ಸರಿಯಾಗಿ ಆಹಾರ ಪೂರೈಕೆಯಾಗುತ್ತಿಲ್ಲ. ಆಹಾರ ಮತ್ತು ಪಡಿತರ ಹಂಚಿಕೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಸರ್ಕಾರಕ್ಕೆ ವರದಿ ನೀಡಿತ್ತು. ಈ ವಿಚಾರ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಪ್ರಸ್ತಾಪವಾಗಿದ್ದರಿಂದ ಹೈಕೋರ್ಟ್ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು.
ಈ ಕುರಿತು ಸರ್ಕಾರದ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಲಿಖಿತ ಮಾಹಿತಿ ನೀಡಿ, ಕಾನೂನು ವಿವಿ ವರದಿಯನ್ನು ಅಲ್ಲಗಳೆದಿದ್ದಾರೆ. ವಿವಿಯ ನಿಯೋಜಿತ ತಂಡ ರಾಜ್ಯಾದ್ಯಂತ ಸಮೀಕ್ಷೆ ನಡೆಸಿರುವುದಾಗಿ ಹೇಳಿದೆ. ಆದರೆ, ಅವರು ರಾಜ್ಯದ ಯಾವ ಭಾಗಕ್ಕೂ ತೆರಳಿಲ್ಲ. ಕೇವಲ ಫೋನ್ ಮೂಲಕ 100 ಹಳ್ಳಿಗಳ 152 ಜನರನ್ನು ಮಾತ್ರ ಮಾತನಾಡಿಸಿ, ಅವರ ಅಭಿಪ್ರಾಯದ ಮೇಲೆ ವರದಿ ಸಿದ್ದಪಡಿಸಿದ್ದಾರೆ. ಇಷ್ಟು ಕಡಿಮೆ ಜನರ ಅಭಿಪ್ರಾಯದ ಮೇಲೆ ಇಡೀ ರಾಜ್ಯದ ಪರಿಸ್ಥಿತಿ ಅಂದಾಜಿಸುವುದು ಸೂಕ್ತ ಮಾರ್ಗವಲ್ಲ. ಹೀಗಾಗಿ ರಾಷ್ಟ್ರೀಯ ವಿವಿಯ ವರದಿ ಸುಳ್ಳು ಎಂದು ತಿಳಿಸಿದ್ದಾರೆ.
ಅಲ್ಲದೇ, ಲಾಕ್ಡೌನ್ ಜಾರಿ ಮಾಡಿದಾಗಿನಿಂದ ರಾಜ್ಯದ ವಿವಿಧ ಮೂಲೆಗಳಿಂದ ಎಂಟು ಸಾವಿರಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿದ್ದು, ದೂರುಗಳನ್ನು ದಾಖಲಿಸಲಾಗಿದೆ. ಆಹಾರ ಆಯೋಗ ರಾಜ್ಯದ ವಿವಿಧೆಡೆ ಭೇಟಿ ನೀಡಿ 1400 ಕ್ಕೂ ಹೆಚ್ಚು ತಪಾಸಣೆಗಳನ್ನು ನಡೆಸಿದೆ. ಅಕ್ರಮ ಎಸಗಿದ ಆರೋಪದಡಿ 441 ಪಡಿತರ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. 155 ಅಂಗಡಿಗಳನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟಿಗೆ ತಿಳಿಸಿದ್ದಾರೆ.