ಬೆಂಗಳೂರು : ಜೀವ ಉಳಿಸುವವರು ವೈದ್ಯರು. ಅದಕ್ಕಾಗಿಯೇ ವೈದ್ಯೋ ನಾರಾಯಣೋ ಹರಿಃ ಎಂಬ ನಾಣ್ಣುಡಿ ಇದೆ. ಜನರ ಜೀವ ಉಳಿಸುವ ವೈದ್ಯರನ್ನು ಭಗವಂತನ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಇದಕ್ಕೊಂದು ನಿದರ್ಶನವೆಂದರೆ ಕೋವಿಡ್ ಪಿಡುಗು ದೇಶವನ್ನು ಆವರಿಸಿದ್ದಾಗ ವೈದ್ಯರ ಪ್ರಾಮುಖ್ಯತೆ ಎಷ್ಟಿತೆಂದು ಮನವರಿಕೆಯಾಗಿತ್ತು.
ಭಾರತದಲ್ಲಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸುವ ಮೂಲಕ ವೈದ್ಯರ ಸೇವೆ ನೆನೆದು ಗೌರವಿಸಲಾಗುತ್ತದೆ. ನಾಳೆ ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದೆ. ಭಾರತೀಯ ವೈದ್ಯಕೀಯ ಸಂಸ್ಥೆ 1991 ಜುಲೈ 1 ರಂದು ಮೊದಲ ಬಾರಿಗೆ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಿತು. ಅದಕ್ಕೆ ಒಂದು ಕಾರಣವೂ ಇದೆ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ ಬಿಧನ್ ಚಂದ್ರ ರಾಯ್ ಅವರ ನೆನಪಿನಲ್ಲಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ವೈದ್ಯರಾಗಿದ್ದ ರಾಯ್, ಸುಧಾರಣಾ ವಾದಿ, ಶಿಕ್ಷಣ ತಜ್ಞರು, ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರ ಜನನ ಮತ್ತು ಮರಣ ದಿನ ಒಂದೇ ದಿನ ಬರುವುದು ಮತ್ತೊಂದು ವಿಶೇಷ.
ಅಸಾಧಾರಣ ವೈದ್ಯರಾಗಿದ್ದ ರಾಯ್ ಅವರ ಸೇವೆಯನ್ನು ಪರಿಗಣಿಸಿ 1961 ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಎಲ್ಲರಿಗೂ ಮಾದರಿ ವೈದ್ಯರಾಗಿ ತಮ್ಮ ಬದುಕನ್ನು ಸವೆಸಿದ ಬಿಧನ್ ಚಂದ್ರ ರಾಯ್ ಅವರ ನೆನಪಿನಲ್ಲೇ ರಾಷ್ಟ್ರೀಯ ವೈದ್ಯರ ದಿನ ಆಚರಿಸಬೇಕೆಂದು ನಿರ್ಧರಿಸಿ ಕೇಂದ್ರ ಸರ್ಕಾರ 1991 ರ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಅನುಮೋದಿಸಿತು.
ವೈದ್ಯರಿಗೂ ಇದೆ ಸಂಕಷ್ಟ : ಹಿಂದೆ ಮೆರಿಟ್‍ನಲ್ಲಿ ಉತ್ತೀರ್ಣರಾದ ಬಹುತೇಕ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದತ್ತ ಒಲವು ತೋರುತ್ತಿದ್ದರು. ಅದಕ್ಕೆ ಕಾರಣ ಆ ವೃತ್ತಿಯಲ್ಲಿ ಇದ್ದ ಮಾನವೀಯ ಸ್ಪರ್ಶ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ವಿಶೇಷ ಅವಕಾಶ. ರೋಗಿಯ ನೋವು ನಿವಾರಿಸಿದಾಗ ಸಿಗುತ್ತಿದ್ದ ಒಂದಿಷ್ಟು ಸಾರ್ಥಕ ಭಾವ ಮತ್ತು ಆ ವೃತ್ತಿಗೆ ಇದ್ದ ಉನ್ನತ ಗೌರವವೂ ಬಹಳಷ್ಟು ಜನರನ್ನು ಆಕರ್ಷಿಸಿದ್ದುಂಟು.
ಹಾಗೆಂದ ಮಾತ್ರಕ್ಕೆ ವೈದ್ಯರಾಗುವುದು ಸುಲಭವಲ್ಲ. ವೃತ್ತಿಗಿಳಿದ ಮೇಲೆಯೂ ಆತನ ಬವಣೆಗಳು ಮುಗಿಯುವುದಿಲ್ಲ. ವೃತ್ತಿಯ ಒತ್ತಡದಿಂದಾಗಿ ವೈಯಕ್ತಿಕ ಹಾಗೂ ಕೌಟುಂಬಿಕ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಲೇ ಸಾಗಬೇಕು. ಆದರೆ, ಈ ಎಲ್ಲ ಕಷ್ಟಗಳ ನಡುವೆಯೂ ಆತನಿಗೆ ಅಲ್ಲಿ ಸಂತೃಪ್ತಿ, ಸುರಕ್ಷತೆ ಇರುತಿತ್ತು. ಗುಣಮುಖರಾದವರು ತೋರುತ್ತಿದ್ದ ಗೌರವ ಮತ್ತು ಕೃತಜ್ಞತೆ ಅವನನ್ನು ಇನ್ನಷ್ಟು ಸೇವೆ ಮಾಡಲು ಪ್ರೋತ್ಸಾಹಿಸುತ್ತಿತ್ತು.
ಆದರೆ ಪರಿಸ್ಥಿತಿ ಬದಲಾಗಿದೆ. ವೈದ್ಯರನ್ನು ದೇವರೆಂದು ಆರಾಧಿಸುವ ದಿನಗಳು ಕಳೆದು ಹೋಗಿವೆ. ಆತನನ್ನು ಮಾನವೀಯತೆಯಿಲ್ಲದ ವ್ಯಾಪಾರಿ ಮನೋಭಾವದವನು ಎಂದು ಬಿತ್ತರಿಸಲಾಗುತ್ತಿದೆ. ಆತನ ನಿಯಂತ್ರಣದಲ್ಲಿಲ್ಲದ ಕಾರಣದಿಂದ ರೋಗಿಯ ಸಾವು ಸಂಭವಿಸಿದರೂ ಅದಕ್ಕೂ ಅವನ ನಿರ್ಲಕ್ಷ್ಯತನವೇ ಹೊಣೆ ಎಂದು ಅರ್ಥೈಸಲಾಗುತ್ತಿದೆ. ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯ ಪ್ರಾಣಕ್ಕೆ ಹಾನಿಯಾದರೆ, ಹಿಂದು ಮುಂದು ಯೋಚಿಸದೇ ವೈದ್ಯರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಆಸ್ಪತ್ರೆಗಳ ಪರಿಕರಗಳನ್ನು ಧ್ವಂಸ ಮಾಡಲಾಗುತ್ತಿದೆ. ಇದರ ಪರಿಣಾಮವೆಂಬಂತೆ ಇಂದಿನ ವಿದ್ಯಾರ್ಥಿಗಳು ವೈದ್ಯ ವೃತ್ತಿಗೆ ಇಳಿಯಲು ಹಿಂದು ಮುಂದು ನೋಡುತ್ತಿದ್ದಾರೆ.
ಒಂದು ವೇಳೆ ಪದವಿಯನ್ನು ಇಲ್ಲಿ ಪಡೆದರೂ ಹೊರ ದೇಶಗಳಲ್ಲಿ ವೃತ್ತಿಯನ್ನು ಮುಂದುವರೆಸುವುದರ ಬಗ್ಗೆ ಅನೇಕರು ಆಲೋಚನೆ ಮಾಡುತ್ತಿದ್ದಾರೆ. ಈ ಬದಲಾವಣೆಗೆ ಕಾರಣವೇನು? ಎಂದು ಯೋಚಿಸುವುದಾದರೆ, ಎಲ್ಲೋ ಒಬ್ಬಿಬ್ಬರು ವೈದ್ಯರು ಹಣದ ಆಮಿಷಕ್ಕೊಳಗಾಗಿ ದುರಾಚಾರಗಳನ್ನೆಸಗಿರಬಹುದು. ಎಲ್ಲೋ ಕೆಲ ಸಂದರ್ಭಗಳಲ್ಲಿ ವೈದ್ಯರ ನಿರ್ಲಕ್ಷ್ಯತನದಿಂದ ರೋಗಿಗೆ ಹಾನಿಯಾಗಿರಬಹುದು. ಆದರೆ ಇದಕ್ಕಾಗಿ ಎಲ್ಲ ವೈದ್ಯರನ್ನೂ ಸಾಮಾನ್ಯೀಕರಿಸುವುದು ಎಷ್ಟರ ಮಟ್ಟಿಗೆ ಸರಿ? ಇಂದಿಗೂ ಐದು ರೂ. ಹತ್ತು ರೂ. ತೆಗೆದುಕೊಂಡು ರೋಗಿಗಳ ಸೇವೆಯನ್ನು ಮಾಡುತ್ತಿರುವ ವೈದ್ಯರು ನಮ್ಮೊಂದಿಗಿದ್ದಾರೆ.
ವೈದ್ಯರ ರಕ್ಷಣೆಗೆ ಬೇಕಿದೆ ಕಾನೂನಿನ ಬಲ : ಜನರ ಜೀವ ರಕ್ಷಿಸುವ ವೈದ್ಯರು, ರೋಗಿಗಳ ಸಂಬಂಧಿಕರು ಅಥವಾ ಸ್ನೇಹಿತರಿಂದ ಹಲ್ಲೆಗೊಳಗಾದ ಸಂದರ್ಭಗಳು ಸಾಕಷ್ಟು ಬಂದಿವೆ. ರಕ್ಷಣೆಗಾಗಿ ಆಗ್ರಹಿಸಿ ಬೀದಿಗಿಳಿದು ವೈದ್ಯರು ಹೋರಾಟಗಳನ್ನು ನಡೆಸಿರುವ ಮತ್ತು ನಡೆಸುತ್ತಿರುವ ಉದಾಹರಣೆಗಳು ಇವೆ. ವೈದ್ಯರಿಗೆ ರಕ್ಷಣೆ ನೀಡುವಂತ ಕಾನೂನು ಇಲ್ಲ ಎಂದಲ್ಲ. ಕೇಂದ್ರ ಸರ್ಕಾರ ವೈದ್ಯರ ರಕ್ಷಣೆಗಾಗಿ ಕಾಯಿದೆಯನ್ನೇ ತಂದಿದೆ. ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ.
ಜಾಮೀನು ರಹಿತ ಅಪರಾಧ : ಹೊಸ ಕಾನೂನಿನ ಪ್ರಕಾರ, ವೈದ್ಯರ ಮೇಲೆ ಹಲ್ಲೆ ನಡೆಸುವುದು ಜಾಮೀನು ರಹಿತ ಅಪರಾಧ. ದೂರು ದಾಖಲಾಗಿ ಮೂವತ್ತು ದಿನದೊಳಗೆ ತನಿಖೆ ನಡೆಸಬೇಕಾಗುತ್ತದೆ. ಅಪರಾಧಿಗೆ ಕನಿಷ್ಠ 3 ತಿಂಗಳು ಹಾಗೂ ಗರಿಷ್ಠ 5 ವರ್ಷ ಜೈಲು ಶಿಕ್ಷೆ ಮತ್ತು ಕನಿಷ್ಠ 50 ಸಾವಿರ ರೂ.ನಿಂದ ಗರಿಷ್ಠ 2 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ.
ಒಂದು ವೇಳೆ ವೈದ್ಯರಿಗೆ ಗಂಭೀರ ಸ್ವರೂಪದ ಗಾಯಗಳಾದರೆ, ಅಪರಾಧಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ವರೆಗೆ ದಂಡ ವಿಧಿಸುವ ಅವಕಾಶವೂ ಇದೆ. ಆಸ್ತಿಗೆ ಹಾನಿ ಉಂಟು ಮಾಡಿದರೆ ಅದರ ಮಾರುಕಟ್ಟೆ ಮೌಲ್ಯದ ಎರಡರಷ್ಟು ದಂಡ ವಿಧಿಸಬಹುದು.
ದೇಶದಲ್ಲಿ ಶೇ.75 ರಷ್ಟು ವೈದ್ಯರು ಒಂದಲ್ಲ ಒಂದು ರೀತಿಯಲ್ಲಿ ಹಿಂಸೆ ಅನುಭವಿಸಿದ್ದಾರೆ. ಅದು ದೈಹಿಕವಾಗಿ ಆಗಬೇಕೆಂದಿಲ್ಲ. ಪ್ರತಿಸಲವೂ ರೋಗಿಗಳ ಕಡೆಯವರಿಂದ ನಿಂದನೆಗಳನ್ನು ಕೇಳಿಸಿಕೊಳ್ಳಬೇಕಾಗಿದೆ. ಕೆಲ ಬಾರಿ ಸ್ಥಳಕ್ಕೆ ಪೊಲೀಸರನ್ನು ಕರೆಸಿಕೊಳ್ಳುವ ಅನಿವಾರ್ಯತೆಯೂ ಬರುತ್ತದೆ ಎನ್ನುತ್ತಾರೆ ವೈದ್ಯರು.
ಮಾನವೀಯ ಸ್ಪಂದನೆಯೂ ಮುಖ್ಯ: ಕಾಯಿಲೆಗಳ ವರ್ತನೆ ಮತ್ತು ಚಿಕಿತ್ಸೆಗೆ ರೋಗಿಯ ದೇಹದ ಸ್ಪಂದನೆ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತದೆ. ಅಲ್ಲದೆ ವೈದ್ಯರ ನಿಯಂತ್ರಣದಲ್ಲಿಲ್ಲದ ಎಷ್ಟೋ ಅಂಶಗಳೂ ಚಿಕಿತ್ಸೆಯ ವೇಳೆಯಲ್ಲಿ ತೊಡರನ್ನು ತರುತ್ತವೆ ಎಂಬುದನ್ನು ಪ್ರತಿಯೊಬ್ಬರೂ ಅರಿತಿರಬೇಕು. ರೋಗಿಗೆ ಔಷಧೋಪಚಾರದ ಜೊತೆಯಲ್ಲಿಯೇ ಮಾನವೀಯ ಸ್ಪಂದನೆಯೂ ಮುಖ್ಯ ಎಂಬುದನ್ನು ವೈದ್ಯನೂ ಮನಗಾಣಬೇಕು. ಕಾಯಿಲೆಯನ್ನು ಗುಣಪಡಿಸುವುದರ ಜೊತೆಯಲ್ಲಿ ಜನರ ಆರೋಗ್ಯಕ್ಕೂ ಆತ ಸಲಹೆ ನೀಡಬೇಕು.
ಪ್ರತಿಯೊಬ್ಬ ವೈದ್ಯ ನೈತಿಕ ಗುಣ ಅಥವಾ ಶಿಕ್ಷಣದಲ್ಲಿ ಕೊರತೆ ಇರುವವರಿಗೆ ವೃತ್ತಿಯನ್ನು ಪ್ರವೇಶಿಸದಂತೆ ರಕ್ಷಿಸಲು ಸಹಾಯ ಮಾಡಬೇಕು. ವೈದ್ಯರು ತಮ್ಮ ವೃತ್ತಿಪರ ಅಭ್ಯಾಸಕ್ಕೆ ಸಂಬಂಧಿಸಿದಂತೆ ನೋಂದಾಯಿಸದ ಅಥವಾ ವೈದ್ಯಕೀಯ ಕಾಯಿದೆಗಳ ಅಡಿಯಲ್ಲಿ ಸೇರ್ಪಡೆಗೊಳ್ಳದ ಯಾವುದೇ ಅಟೆಂಡೆಂಟ್ ಅನ್ನು ನೇಮಿಸಿಕೊಳ್ಳಬಾರದು ಮತ್ತು ವೃತ್ತಿಪರ ವಿವೇಚನೆ ಅಥವಾ ಕೌಶಲ್ಯದ ಅಗತ್ಯವಿರುವಲ್ಲಿ ರೋಗಿಗಳಿಗೆ ಹಾಜರಾಗಲು, ಚಿಕಿತ್ಸೆ ನೀಡಲು ಅಥವಾ ಕಾರ್ಯಾಚರಣೆಗಳನ್ನು ನಿರ್ವಹಿಸಲು ಅಂತಹ ವ್ಯಕ್ತಿಗಳಿಗೆ ಅನುಮತಿಸುವುದಿಲ್ಲ. ವೈದ್ಯಕೀಯ ಅಭ್ಯಾಸದಲ್ಲಿ ತೊಡಗಿರುವ ವೈದ್ಯರು ರೋಗಿಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕು. ವೈದ್ಯರ ವೈಯಕ್ತಿಕ ಆರ್ಥಿಕ ಆಸಕ್ತಿಗಳು ರೋಗಿಗಳ ವೈದ್ಯಕೀಯ ಹಿತಾಸಕ್ತಿಗಳೊಂದಿಗೆ ಸಂಘರ್ಷಿಸಬಾರದು.
ವೈದ್ಯರ ಕರ್ತವ್ಯಗಳೇನು? : ವೈದ್ಯರು ತಮ್ಮ ಸೇವೆಯನ್ನು ಕೇಳುವ ಪ್ರತಿಯೊಬ್ಬ ವ್ಯಕ್ತಿಗೆ ಚಿಕಿತ್ಸೆ ನೀಡಲು ಬದ್ಧನಾಗಿಲ್ಲದಿದ್ದರೂ, ಅವರು ರೋಗಿಗಳ ಮತ್ತು ಗಾಯಗೊಂಡವರ ಕರೆಗಳಿಗೆ ಪ್ರತಿಕ್ರಿಯಿಸಲು ಸಿದ್ಧರಾಗಿಬೇಕು. ಆದರೆ, ಅವರ ಧ್ಯೇಯದ ಉನ್ನತ ಪಾತ್ರದ ಬಗ್ಗೆ ಜಾಗರೂಕರಾಗಿಬೇಕು. ತನ್ನ ವೃತ್ತಿಪರ ಕರ್ತವ್ಯಗಳ ಸಂದರ್ಭದಲ್ಲಿ ಅವನು ನಿರ್ವಹಿಸುವ ಜವಾಬ್ದಾರಿ. ರೋಗಿಯ ಚಿಕಿತ್ಸೆಯಲ್ಲಿ ಅವರ ಆರೈಕೆಗೆ ಒಪ್ಪಿಸಲ್ಪಟ್ಟವರ ಆರೋಗ್ಯ ಮತ್ತು ಜೀವನವು ಅವನ ಕೌಶಲ್ಯ ಮತ್ತು ಗಮನವನ್ನು ಅವಲಂಬಿಸಿರುತ್ತದೆ ಎಂಬುದನ್ನು ಮರೆಯಬಾರದು.
ಯಾವುದೇ ವೈದ್ಯರು ನಿರಂಕುಶವಾಗಿ ರೋಗಿಗೆ ಚಿಕಿತ್ಸೆಯನ್ನು ನಿರಾಕರಿಸಬಾರದು. ತಾಳ್ಮೆ ಮತ್ತು ಸೂಕ್ಷ್ಮತೆಯು ವೈದ್ಯರ ಲಕ್ಷಣವಾಗಿರಬೇಕು. ಗಂಭೀರ ಅನಾರೋಗ್ಯದ ಸಂದರ್ಭದಲ್ಲಿ ಮತ್ತು ಅನುಮಾನಾಸ್ಪದ ಅಥವಾ ಕಷ್ಟಕರ ಪರಿಸ್ಥಿತಿಯಲ್ಲಿ ವೈದ್ಯರು ಸಮಾಲೋಚನೆ ಮಾಡಬೇಕು. ಆದರೆ, ಯಾವುದೇ ಸಂದರ್ಭದಲ್ಲಿ ಅಂತಹ ಸಮಾಲೋಚನೆ ಸಮರ್ಥನೀಯವಾಗಿರಬೇಕು ಮತ್ತು ರೋಗಿಯ ಹಿತಾಸಕ್ತಿಯಿಂದ ಮಾತ್ರವೇ ಹೊರತು ಬೇರೆ ಯಾವುದೇ ಪರಿಗಣನೆಗೆ ಅಲ್ಲ. ಪ್ರತಿ ಸಮಾಲೋಚನೆಯಲ್ಲಿ ರೋಗಿಗೆ ಪ್ರಯೋಜನವು ಮುಖ್ಯವಾಗಿದೆ.
ಇದನ್ನೂ ಓದಿ: ಇಂದು ರಾಷ್ಟ್ರೀಯ ವೈದ್ಯರ ದಿನ.. ಏನಿದರ ವಿಶೇಷತೆ, ಯಾರ ಸ್ಮರಣಾರ್ಥವಾಗಿ ಈ ದಿನ?