ಬೆಂಗಳೂರು: ಭಾರತ್ ಜೋಡೋ ಯಾತ್ರೆಯಲ್ಲಿ ಹಕ್ಕುಸ್ವಾಮ್ಯ ಪಡೆಯದೇ ಕೆಜಿಎಫ್ 2 ಚಿತ್ರದ ಹಾಡು ಬಳಕೆ ಪ್ರಕರಣ ಸಂಬಂಧ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್ಸಿ) ಮತ್ತು ಭಾರತ್ ಜೋಡೋದ ಅಧಿಕೃತ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡುವಂತೆ ಟ್ವಿಟರ್ ಸಂಸ್ಥೆಗೆ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.
ಎಂಆರ್‌ಟಿ ಮ್ಯೂಸಿಕ್ ಕೆಜಿಎಫ್ 2 ಹಿಂದಿ ಚಿತ್ರಗೀತೆಗಳ ಹಕ್ಕುಸ್ವಾಮ್ಯ ಹೊಂದಿದೆ. ಆದರೆ, ಎಂಆರ್‌ಟಿ ಮ್ಯೂಸಿಕ್‌ನಿಂದ ಹಕ್ಕುಸ್ವಾಮ್ಯ ಪಡೆಯದೇ ಭಾರತ್ ಜೋಡೊ ಯಾತ್ರೆಯಲ್ಲಿ ಕೆಜಿಎಫ್ 2 ಚಿತ್ರದ ಹಿಂದಿ ಗೀತೆ ಬಳಕೆ ಸಂಬಂಧ ಎಂಆರ್‌ಟಿ ಮ್ಯೂಸಿಕ್ ಕಂಪನಿ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿತ್ತು.
ಇದನ್ನೂ ಓದಿ: ಕೆಜಿಎಫ್ 2 ಚಿತ್ರದ ಹಾಡು ಹಕ್ಕುಸ್ವಾಮ್ಯ ಪಡೆಯದೇ ಬಳಕೆ: ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಕೇಸ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಿದ ನ್ಯಾ.ಜಿ.ನರೇಂದರ್ ಮತ್ತು ಪಿ.ಎನ್,ದೇಸಾಯಿ ಅವರಿದ್ದ ವಿಭಾಗೀಯ ಪೀಠ, ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ ನೀಡಿದ ಆದೇಶವನ್ನು ರದ್ದು ಪಡಿಸಿ ಆದೇಶಿಸಿದೆ. ಅಲ್ಲದೆ, ಪ್ರಕರಣವನ್ನು ಪುನರ್ ಪರಿಶೀಲನೆಗೆ ವಾಣಿಜ್ಯ ನ್ಯಾಯಾಲಯಕ್ಕೆ ರವಾನಿಸಿದೆ.
ಟ್ವಿಟ್ಟರ್ ಖಾತೆಗಳ ಪರಿಶೀಲನೆಗಾಗಿ ಕೋರ್ಟ್ ಕಮಿಷನರ್ ನೇಮಕ ಮಾಡಿರುವ ವಿಚಾರಣಾ ನ್ಯಾಯಾಲಯ ತೀರ್ಮಾನ ಅವಧಿಪೂರ್ವ ನಿರ್ಧಾರವಾಗಿದೆ. ಪೊಲೀಸ್ ಸಿಬ್ಬಂದಿ ಮಾಡಬೇಕಾದ ಕಾರ್ಯಕ್ಕೆ ತಾಂತ್ರಿಕ ತಜ್ಞರಾದ ಕೋರ್ಟ್ ಕಮಿಷನರ್ ನೇಮಕ ಮಾಡಿದಂತಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಇದನ್ನೂ ಓದಿ: ಕೆಜಿಎಫ್ ಮ್ಯೂಸಿಕ್ ಬಳಕೆ.. ಕಾಂಗ್ರೆಸ್, ಭಾರತ್ ಜೋಡೋ ಟ್ವಿಟರ್ ಖಾತೆ ಅಮಾನತಿಗೆ ಕೋರ್ಟ್ ಸೂಚನೆ
ಹಕ್ಕು ಸ್ವಾಮ್ಯದ ಆರೋಪದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬಳಕೆ ಮಾಡಿಕೊಂಡಿರುವ 45 ಸೆಕೆಂಡ್ಗಳ ಆಕ್ಷೇಪಾರ್ಹ ಸಂಗೀತವನ್ನು ಎಲ್ಲ ಸಾಮಾಜಿಕ ಜಾಲಾತಾಣಗಳಲ್ಲಿ ತೆಗದುಹಾಕುವುದಕ್ಕೆ ಒಪ್ಪಿಕೊಂಡಿದೆ. ಈ ಸಂಬಂಧದ ಸ್ಕ್ರೀನ್ಶಾಟ್ಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಸೂಚಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಅಭಿಷೇಕ್ ಸಿಂಘ್ವಿ, ಹಕ್ಕು ಸ್ವಾಮ್ಯ ಉಲ್ಲಂಘನೆ ಆರೋಪದಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಸಂಗೀತ ಬಳಕೆ ಮಾಡಿಕೊಂಡಿರುವ ಟ್ವಿಟ್ಗಳನ್ನು ತೆಗೆದುಹಾಕುವುದಕ್ಕೆ ಅರ್ಜಿದಾರರು ಸಿದ್ದರಿದ್ದಾರೆ. ಆದರೆ, ವಿಚಾರಣಾ ನ್ಯಾಯಾಲಯ ಪ್ರತಿವಾದಿಗಳ ವಾದ ಆಲಿಸದೆ ಟ್ವಿಟರ್ ಖಾತೆಗಳಿಗೆ ನಿರ್ಬಂಧ ವಿಧಿಸುವುದಕ್ಕೆ ಯಾವುದೇ ರೀತಿಯ ತುರ್ತು ಸಕಾರಣಗಳಿರಲಿಲ್ಲ. ಆದರೆ, ಏಕಾಏಕಿ ಖಾತೆಯನ್ನು ತಾತ್ಕಾಲಿಕ ತಡೆ ಹಿಡಿಯುವಂತೆ ಸೂಚನೆ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವಾದ ಮಂಡಿಸಿದರು.
ಅಲ್ಲದೆ, ಕೆಜಿಎಫ್ ಚಾಪ್ಟರ್ 2 ಹಾಡುಗಳನ್ನು ಅಕ್ಟೋಬರ್ ತಿಂಗಳಿನಿಂದ ಬಳಕೆಯಾಗುತ್ತಿದೆ. ಆದರೆ, ಹಕ್ಕು ಸ್ವಾಮ್ಯ ಹೊಂದಿರುವುದಾಗಿ ಹೇಳುತ್ತಿರುವ ಎಂಆರ್‌ಟಿ ಸ್ಟೂಡಿಯೋಸ್ ಅವರು ನವೆಂಬರ್ 2 ರಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಅರ್ಜಿಯನ್ನು ನವೆಂಬರ್ 5 ರಂದು ವಿಚಾರಣೆಗೊಳಪಡಿಸಿದ್ದು, ನವೆಂಬರ್ 7 ರಂದು ಪ್ರತಿವಾದಿಗಳ ವಾದವನ್ನು ಆಲಿಸದೆ ಖಾತೆಗಳಿಗೆ ತಡೆ ನೀಡಲಾಗಿದೆ.
ಅಲ್ಲದೆ, ಈ ಸಂಗೀತವನ್ನು ಬಳಕೆ ಮಾಡಿಕೊಳ್ಳುವುದರಲ್ಲಿ ಅರ್ಜಿದಾರರ ಪಕ್ಷಕ್ಕೆ ಯಾವುದೇ ವಾಣಿಜ್ಯ ಉದ್ದೇಶ ಹೊಂದಿಲ್ಲ. ಅಲ್ಲದೆ, ಈ ಸಂಬಂಧ ನೋಟಿಸ್ ಜಾರಿ ಮಾಡದೆ, ಮೇಲ್ಮವಿದಾರರ ವಾದ ಆಲಿಸದೆ ಏಕಾಏಕಿ ಖಾತೆ ಸ್ಥಗಿತಗೊಳಿಸಿದಲ್ಲಿ ಪಕ್ಷದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ವಾದ ಮಂಡಿಸಿದರು.
ಪ್ರಕರಣದ ಹಿನ್ನೆಲೆ: ಕಾಂಗ್ರೆಸ್ ಪಕ್ಷ ದೇಶದಲ್ಲಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ ಚಾಪ್ಟರ್ 2 ರ ಸಂಗೀತವನ್ನು ಬಳಕೆ ಮಾಡಿಕೊಂಡಿತ್ತು. ಅಲ್ಲದೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಯಾತ್ರೆಯ ಅಧಿಕೃತ ಟ್ವಿಟ್ಟರ್ ಖಾತೆಗಳಲ್ಲಿ ಈ ಸಂಗೀತವನ್ನು ಅಳವಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕೆಜಿಎಫ್ ಚಾಪ್ಟರ್ 2ರ ಹಕ್ಕು ಸ್ವಾಮ್ಯ ಹೊಂದಿರುವ ಎಂಆರ್‌ಟಿ ಸ್ಟೂಡಿಯೋಸ್ ನಗರದ ವಾಣಿಜ್ಯ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು.
ವಿಚಾರಣೆ ನಡೆಸಿದ್ದ ನ್ಯಾಯಾಲಯ ಭಾರತೀಯ ರಾಷ್ಟ್ರೀಯ ಕಾಗ್ರೆಸ್ ಮತ್ತು ಭಾರತ್ ಜೋಡೋದ ಅಧಿಕೃತ ಟ್ವಿಟ್ಟರ್ ಖಾತೆಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲು ಸೋಮವಾರ ನಿರ್ದೇಶನ ನೀಡಿತ್ತು. ಅಲ್ಲದೆ, ಟ್ವಿಟ್ಟರ್ ಖಾತೆಗಳ ಪರಿಶೀಲನೆಗೆ ಬೆಂಗಳೂರು ವಾಣಿಜ್ಯ ನ್ಯಾಯಾಲಯದ ಕಂಪ್ಯೂಟರ್ ವಿಭಾಗದ ಜಿಲ್ಲಾ ಆಡಳಿತಗಾರರನ್ನು ಕೋರ್ಟ್ ಕಮಿಷನರ್ನ್ನಾಗಿ ನೇಮಕ ಮಾಡಿತ್ತು. ಜೊತೆಗೆ, ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಪರಿಶೀಲಿಸಿ ಎಲೆಕ್ಟ್ರಾನಿಕ್ ಆಡಿಟ್ ಮಾಡಿ ಸಿಡಿಯಲ್ಲಿ ಸಂಗ್ರಹಿಸುವುದಕ್ಕೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಹೈಕೋರ್ಟ್ ಮೊರೆ ಹೋಗಿತ್ತು.