ಬೆಂಗಳೂರು : ಅರಣ್ಯ ಪ್ರದೇಶದಲ್ಲಿ ಗಾಳಿ ಯಂತ್ರಗಳನ್ನು ಅಳವಡಿಸುವ ಸಂಬಂಧ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣಕ್ಕೆ ಅಧಿಕಾರವಿಲ್ಲ ಎಂದು ರಾಜ್ಯ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಂಬೈ ಮೂಲದ ಮೆಸೆಸ್ ವಿಂಡ್ ವರ್ಲ್ಡ್ ಇಂಡಿಯಾ ಎಂಬ ಕಂಪನಿಗೆ ರಾಜ್ಯದ ಅರಣ್ಯ ಪ್ರದೇಶದಲ್ಲಿ ಗಾಳಿ ಯಂತ್ರಗಳ ಕಾರ್ಯಚರಣೆಗೆ ಅವಕಾಶ ನೀಡುವಂತೆ ಅಹ್ಮದಾಬಾದ್‌ನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣದ ವಿಭಾಗೀಯ ಪೀಠ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರಣ್ಯ ಪ್ರದೇಶದಲ್ಲಿ ಗಾಳಿ ಯಂತ್ರಗಳ ಅಳವಡಿಕೆಗೆ ಅನುಮತಿ ನೀಡುವಂತೆ ಸೂಚನೆ ನೀಡಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣಕ್ಕೆ ಅಧಿಕಾರವಿಲ್ಲ ಎಂದು ತಿಳಿಸಿದೆ. ಅಲ್ಲದೆ, ಅರಣ್ಯ ಇಲಾಖೆ ಸರ್ಕಾರಿ ಸ್ವತ್ತಾಗಿರುವುದರಿಂದ ಈ ರೀತಿಯ ಪ್ರಕರಣಗಳಲ್ಲಿ ಕಂಪನಿ ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ತಪ್ಪಾಗಿ ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಿದೆ. ಹೀಗಾಗಿ, ನ್ಯಾಯಾಧಿಕರಣ ನೀಡಿರುವ ಆದೇಶವನ್ನು ರದ್ದು ಪಡಿಸುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಅರ್ಜಿದಾರ ಕಂಪನಿಯ ಗಾಳಿ ಯಂತ್ರಗಳ ಕಾರ್ಯಚರಣೆ ಅವಕಾಶ ನೀಡದಂತೆ ರಾಜ್ಯ ಸರ್ಕಾರ ನೀಡಿದ್ದ ಆದೇಶವನ್ನು ರದ್ದು ಪಡಿಸುವ ಮೂಲಕ ನ್ಯಾಯಾಧಿಕರಣ ಸಾಂವಿಧಾನಿಕ ನ್ಯಾಯಾಲಯದಂತೆ ಅಧಿಕಾರವನ್ನು ಚಲಾವಣೆ ಮಾಡಿದೆ. ಈ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಇದೆ ಎಂದು ಅಭಿಪ್ರಾಯ ಪಟ್ಟಿದೆ. ಜೊತೆಗೆ, ಕಂಪನಿ ತನ್ನ ಗಾಳಿ ಯಂತ್ರಗಳ ಕಾರ್ಯಚರಣೆ ಮುಂದುವರೆಸಲು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅನುಮತಿ ಪಡೆದುಕೊಳ್ಳಬಹುದಾಗಿದೆ ಎಂದು ಅವಕಾಶ ಕಲ್ಪಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಮೆಸೆಸ್ ವಿಂಡ್ ವರ್ಲ್ಡ್ ಕಂಪನಿಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ 2003ರಲ್ಲಿ ಸುಮಾರು 221.80 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಗಾಳಿ ಯಂತ್ರಗಳ ಅಳವಡಿಸಲು 15 ವರ್ಷಗಳ ಅವಧಿಗೆ ಗುತ್ತಿಗೆ ಪಡೆದುಕೊಂಡಿತ್ತು. 2018 ಕ್ಕೆ ಈ ಅವಧಿ ಮುಕ್ತಾಯವಾಗಿತ್ತು. ಇದಾದ ಬಳಿಕ 2020ರಲ್ಲಿ ಗುತ್ತಿಗೆ ಅವಧಿ ಬಾಕಿಯಿತ್ತು. ಈ ನಡುವೆ ಗಾಳಿ ಯಂತ್ರಗಳ ಬಳಕೆಯಾಗದಿದ್ದಲ್ಲಿ ಹಾಳಾಗಲಿದೆ ಎಂಬುದಾಗಿ ಕಂಪನಿ ಪರವಾನಿಗೆ ನವೀಕರಣ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಅನುಮತಿ ಕೇಳಿತ್ತು. ಇದಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆ ಪಡೆದು ಕಾರ್ಯಚರಣೆ ಮಾಡಬಹುದು ಎಂಬುದಾಗಿ ಅನುಮತಿ ನೀಡಿತ್ತು. ಆದರೆ, ಅರಣ್ಯ ಇಲಾಖೆ ಅನುಮತಿ ಪಡೆಯಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ : ಜನನ, ಮರಣ ಪ್ರಮಾಣ ನೋಂದಣಿ ವ್ಯಾಜ್ಯ ನಿರ್ವಹಣೆ: ಕಂದಾಯ ಇಲಾಖೆಗೆ ವರ್ಗಾಯಿಸಿದ್ದ ಕ್ರಮ ರದ್ದು
ಈ ಮಧ್ಯೆ ಅರಣ್ಯ ಇಲಾಖೆ ಅನುಮತಿ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನು ರದ್ದು ಪಡಿಸಲಾಗಿತ್ತು. ಆದರೆ, ಕಂಪನಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನೆ ಮಾಡದೆ, ನ್ಯಾಯಾಧಿಕರಣದ ಮುಂದೆ ಅರ್ಜಿ ಸಲ್ಲಿಸಿ ಕಂಪನಿ ದಿವಾಳಿಯಾಗಿದೆ ಎಂಬುದಾಗಿ ಘೋಷಣೆ ಮಾಡಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಕಂಪನಿ ದಿವಾಳಿಯಾಗುವುದನ್ನು ತಡೆಯುವುದಕ್ಕಾಗಿ ಗಾಳಿ ಯಂತ್ರಗಳ ಕಾರ್ಯಚರಣೆಗೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದ್ದವು.