ಬೆಂಗಳೂರು: ಲಾಕ್ಡೌನ್ ವೇಳೆ ಕೈಯಲ್ಲಿ ಕೆಲಸವಿಲ್ಲದೆ ಹಸಿವಿನಿಂದ ಬಳಲುತ್ತಿದ್ದ ವಲಸೆ ಕಾರ್ಮಿಕರು, ನಿರ್ಗತಿಕರ ಕಷ್ಟಕ್ಕೆ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಸಂಸ್ಥೆ ಸ್ಪಂದಿಸಿದೆ.
ಸಂಸ್ಥೆಯ ಸದಸ್ಯರ ನೆರವಿನಿಂದ ಹಣ ಒಟ್ಟುಗೂಡಿಸಿ ಸಾಮಾಜಿಕ ಕಾರ್ಯ ಮಾಡಿದೆ. ಲಾಕ್ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರು ಊಟಕ್ಕಾಗಿ ಪರಿತಪಿಸುತ್ತಿರುವುದನ್ನು ಕಂಡು ಏನಾದರೂ ಸಹಾಯ ಮಾಡಬೇಕೆಂದು ಸಂಘಟನೆ ಸದಸ್ಯರು ಸಿದ್ಧರಾಗಿದ್ದಾರೆ. ಈ ಹಿನ್ನೆಲೆ ಸಂಸ್ಥೆಯ ಗಾಂಧಿನಗರ ವಿಭಾಗದ ಅಧ್ಯಕ್ಷ ರವಿ ನೇತೃತ್ವದಲ್ಲಿ ಕಳೆದ 36 ದಿನಗಳಿಂದ 15 ಸಾವಿರಕ್ಕೂ ಹೆಚ್ಚು ಬಡವರಿಗೆ ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಎನ್.ರವಿ, ಸದಸ್ಯರೆಲ್ಲರೂ ತುಂಬು ಮನದಿಂದಲೇ ದೇಣಿಗೆ ಸಂಗ್ರಹಿಸಿಕೊಂಡು ಪ್ರತಿದಿನ ಸುಮಾರು 300ಕ್ಕಿಂತ ಹೆಚ್ಚಿನ ಆಹಾರ ಪೊಟ್ಟಣ ಹಂಚಿದ್ದಾರೆ. ಶ್ರೀರಾಂಪುರ ಮಾತ್ರವಲ್ಲದೆ ನಗರದ ನಾನಾ ಭಾಗಗಳಲ್ಲಿ ನೆಲೆಸಿರುವ ನಿರ್ಗತಿಕರನ್ನು ಗುರುತಿಸಿ ಅಂತಹವರಿಗೆ ಸಹಾಯ ಮಾಡಿದ್ದೇವೆ ಎಂದು ಖುಷಿ ಹಂಚಿಕೊಂಡರು.