ಬೆಂಗಳೂರು : ದೇಶದ ಆರ್ಥಿಕತೆಯ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸಿ ಇಂದಿನಿಂದ ಎರಡು ದಿನಗಳ ಕಾಲ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಪ್ರತಿಭಟನೆ ಕೈಗೊಂಡಿದ್ದಾರೆ. ಇದರಿಂದಾಗಿ ನಾಳೆಯವರೆಗೂ ಬ್ಯಾಂಕ್, ಎಟಿಎಂ ಹಾಗೂ ಇತರೆ ಸೇವೆಗಳಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ.
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಎಸ್‌ಬಿಐ ಬ್ಯಾಂಕ್ ಆವರಣದಲ್ಲಿ ಜಮಾಯಿಸಿದ ನೌಕರರು ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟಿಸಿದರು. ವಿಶ್ವದ ಬೇರೆ ದೇಶಗಳು ಖಾಸಗಿ ಬ್ಯಾಂಕ್ಗಳನ್ನು ರಾಷ್ಟ್ರೀಕರಣ ಮಾಡಲು ಚಿಂತನೆ ಮಾಡುತ್ತಿವೆ. ಆದರೆ, ನಮ್ಮ ದೇಶದಲ್ಲಿ ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
1947 ರಿಂದ 1969ರ ನಡುವೆ ಸುಮಾರು 560 ಬ್ಯಾಂಕ್ ಮುಚ್ಚಿವೆ. ಸದ್ಯಕ್ಕೆ ಎಲ್ಲಾ ಖಾಸಗಿ ಬ್ಯಾಂಕ್ಗಳು ನಷ್ಟದಲ್ಲಿವೆ. ಈ ನಡುವೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡುತ್ತೇವೆ ಎಂದು ಕೇಂದ್ರ ಬಜೆಟ್ನಲ್ಲಿ ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಕೃಷಿ ಸಾಲ, ಮನೆ ಸಾಲ, ಶಿಕ್ಷಣಕ್ಕೆ ಸಾಲ ಸಿಗಲ್ಲ ಎಂದು ಬ್ಯಾಂಕ್ ಯೂನಿಯನ್ ಸಂಯುಕ್ತ ವೇದಿಕೆಯ ಸ್ಟೇಟ್ ಕನ್ವಿನರ್ ಎಸ್ ಕೆ ಶ್ರೀನಿವಾಸ್ ತಿಳಿಸಿದ್ದಾರೆ.
ಶಿವಮೊಗ್ಗ: ಖಾಸಗೀಕರಣ ಬೇಡವೆಂದ ನೌಕರರು
ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ನಿಲ್ಲಿಸಿ ಎಂದು ಆಗ್ರಹಿಸಿ ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆ ವತಿಯಿಂದ ನಗರದ ಎಸ್‌ಬಿಐ ಬ್ಯಾಂಕ್ ಪ್ರಧಾನ ಕಚೇರಿ ಎದುರು ಪ್ರತಿಭಟಿಸಲಾಯಿತು. ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ ನೌಕರರು ಮಾತನಾಡಿ, 1969ರಲ್ಲಿ ಖಾಸಗಿ ಬ್ಯಾಂಕುಗಳನ್ನು ದೇಶದ ಒಳಿತಿಗಾಗಿ ರಾಷ್ಟ್ರೀಕೃತಗೋಳಿಸಲಾಯಿತು. ಆದರೆ, ಇಂದು ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ಬೇಸರಿಸಿದರು.
ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರ : ಸಾರ್ವಜನಿಕರ ಪರದಾಟ
ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟವಾಗಿರುವ ಯುಎಫ್‌ಬಿಯು ಮಾ.15 ಹಾಗೂ 16ರಂದು ಮುಷ್ಕರ ನಡೆಸಲು ಕರೆ ನೀಡಿರುವ ಹಿನ್ನೆಲೆ ಬಾಗೇಪಲ್ಲಿಯಲ್ಲಿ ಬ್ಯಾಂಕ್‌ಗಳ ಸೇವೆ ಸ್ಥಗಿತಗೊಂಡಿದ್ದು, ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಸಾಲು ಸಾಲು ರಜಾ ಇದ್ದ ಕಾರಣ, ಬ್ಯಾಂಕ್ ಮುಂದೆ ಪರದಾಡಿದರು.
ಸಾರ್ವಜನಿಕ ಆಸ್ತಿಗಳ ಲೂಟಿಗೆ ಕೇಂದ್ರ ಸರ್ಕಾರ ಮುಂದಾಗಿದೆ
ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕೆಂದು ಒತ್ತಾಯಿಸಿ, ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆಯೊಂದಿಗೆ ಮೈಸೂರಿನ ರಾಷ್ಟ್ರೀಕೃತ ವಿವಿಧ ಬ್ಯಾಂಕ್‌ಗಳ ನೌಕರರು ಟಿ ಕೆ ಲೇಔಟ್ನಲ್ಲಿರುವ ಎಸ್‌ಬಿಐ ಪ್ರಾದೇಶಿಕ ಕಚೇರಿ ಮುಂದೆ ಪ್ರತಿಭಟಿಸಿದರು.
ದೊಡ್ಡ ಸಾಲಗಾರರ ಬಾಕಿ ವಸೂಲಿಗೆ ದಿಟ್ಟ ಪ್ರಯತ್ನ ಮಾಡುವುದರ ಬದಲಾಗಿ, ಬ್ಯಾಂಕ್ಗಳನ್ನು ಖಾಸಗಿ ಮಾಲೀಕರಿಗೆ ಮಾರಾಟ ಮಾಡಿ ಸಾರ್ವಜನಿಕ ಆಸ್ತಿಗಳ ಲೂಟಿಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದಲ್ಲಿಯೂ ಬ್ಯಾಂಕ್ ಮುಷ್ಕರಕ್ಕೆ ಬೆಂಬಲ
ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ನೀಡಿರುವ ಬ್ಯಾಂಕ್ ಮುಷ್ಕರವನ್ನು ಬೆಂಬಲಿಸಿ ಧಾರವಾಡದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಕಚೇರಿ ಎದುರು ಪ್ರತಿಭಟಿಸಲಾಯಿತು. ಬ್ಯಾಂಕ್ ಸಿಬ್ಬಂದಿ ಮುಷ್ಕರಕ್ಕೆ ಎಐಬಿಇಎ, ಎಐಬಿಒಸಿ, ಎಐಬಿಎಫ್, ಐಎನ್‌ಬಿಒಸಿ, ಎನ್‌ಸಿಇಬಿ ಸೇರಿ ಇತರೆ ಸಂಘಟನೆಗಳು ಬೆಂಬಲಿಸಿದವು.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಖಾಸಗೀಕರಣಕ್ಕೆ ವಿರೋಧ
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಹೊಸಪೇಟೆ ನಗರದ ಬಸ್ ನಿಲ್ದಾಣದ ಸ್ಟೇಟ್ ಬ್ಯಾಂಕ್ ಇಂಡಿಯಾ(ಎಸ್ ಬಿಐ) ಲೀಡ್ ಬ್ಯಾಂಕ್ ಮುಂಭಾಗ ನೌಕರರು ಧರಣಿ ನಡೆಸಿದರು. ಎಸ್‌ಬಿಐ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಸೇರಿ ನಾನಾ ಬ್ಯಾಂಕ್ ನೌಕರರು ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಘೋಷಣೆ ಕೂಗಿದರು.
ಬೆಳಗಾವಿಯಲ್ಲಿ ಪ್ರತಿಭಟನಾ ಮೆರವಣಿಗೆ
ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ಹಾಗೂ ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರೋಧಿಸಿ ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆ ಆಶ್ರಯದಲ್ಲಿ ಬೋಗಾರವೇಸ್‌ನಿಂದ ಚೆನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ ಬ್ಯಾಂಕ್ ನೌಕರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎಲ್ಲ ಖಾಸಗೀಕರಣ ಮಾಡುತ್ತಿರುವುದು ಖಂಡನೀಯ
ಬ್ಯಾಂಕ್ ಸುಧಾರಣೆ ನಿಟ್ಟಿನಲ್ಲಿ ಕೆಲ ಕ್ರಮಗಳನ್ನು ಮುಂಗಡ ಪತ್ರದಲ್ಲಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರ, ಎಲ್ಲವನ್ನೂ ಖಾಸಗೀಕರಣ ಮಾಡುತ್ತಿರುವುದು ಖಂಡನೀಯ. ಬ್ಯಾಂಕ್‌ಗಳ ಖಾಸಗೀಕರಣ ಮಾಡುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲವಾಗುತ್ತಿದೆ. ಆದ್ದರಿಂದ ಖಾಸಗೀಕರಣ ಪದ್ಧತಿ ಕೈ ಬಿಡಬೇಕು ಎಂದು ಹುಬ್ಬಳ್ಳಿಯ ಬ್ಯಾಂಕ್ ನೌಕರರು ಆಗ್ರಹಿಸಿದ್ದಾರೆ.
ಬ್ಯಾಂಕ್ ಖಾಸಗೀಕರಣಕ್ಕೆ ವಿರೋಧಿಸಿ ಕಾರವಾರದಲ್ಲಿ ಪ್ರತಿಭಟನೆ
ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಮತ್ತು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉತ್ತರಕನ್ನಡ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪದಾಧಿಕಾರಿಗಳು ಇಂದು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಎಸ್‌ಬಿಐ ಬ್ಯಾಂಕ್ ಎದುರು ಸೇರಿದ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಬ್ಯಾಂಕ್ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ವಲಯದ ಬ್ಯಾಂಕುಗಳು ಖಾಸಗೀಕರಣ, ಆಸ್ತಿ ವಸೂಲಿ, ಕಂಪನಿ ಸ್ಥಾಪನೆ, ಜೀವ ವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆಯುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಖಾಸಗೀಕರಣದಿಂದ ದೇಶದ ಜನರ ಉಳಿತಾಯದ ಹಣ ಲೂಟಿ : ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ಮಾಡಿದ್ರೆ, ದೇಶದ ಜನರ ಉಳಿತಾಯ ಮಾಡಿದ್ದ ಹಣ ಲೂಟಿಗೆ ಅವಕಾಶವಾಗುತ್ತದೆ. ಜನ ಸಾಮಾನ್ಯರು ಬ್ಯಾಂಕಿಂಗ್ ಸೇವೆಯಿಂದ ವಂಚಿತರಾಗುತ್ತಾರೆ. ತಕ್ಷಣವೇ ಸರ್ಕಾರದ ಬ್ಯಾಂಕ್‌ಗಳ ಖಾಸಗೀಕರಣ ಮಾಡುವುದನ್ನ ಕೈ ಬಿಡುವಂತೆ ಮಂಡ್ಯದಲ್ಲಿ ಬ್ಯಾಂಕ್ ನೌಕರರು ಒತ್ತಾಯಿಸಿದ್ದಾರೆ.