ಬೆಂಗಳೂರು : ನಾಳೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಸರ್ಕಾರಿ ಕಾರ್ಯಕ್ರಮಗಳ ಜೊತೆಗೆ ಪಕ್ಷದ ಬೃಹತ್ ಸಮಾವೇಶದಲ್ಲಿ ಭಾಗಿಯಾಗುತ್ತಿದ್ದಾರೆ. ಚುನಾವಣೆ ಸಮೀಪದಲ್ಲಿರುವ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಲ್ಲಿ ಮೋದಿ ಅವರ ಏಳನೇ ಭೇಟಿ ಇದಾಗಿದೆ.
ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ: ನಾಳೆ ಬೆಳಗ್ಗೆ ನವದೆಹಲಿ ವಿಮಾನ ನಿಲ್ದಾಣದಿಂದ ವಾಯುಪಡೆ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ 10.10ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ತೆರಳಲಿರುವ ಪಿಎಂ, 10.45 ರಿಂದ 12 ಗಂಟೆವರೆಗೂ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ.
ಇದನ್ನೂ ಓದಿ : ಚಿಂಚನಸೂರ್ ಕಾಂಗ್ರೆಸ್ ಸೇರ್ಪಡೆಯಿಂದ ಜೆಡಿಎಸ್ ಮೇಲೆ ಯಾವುದೇ ಪರಿಣಾಮ ಉಂಟಾಗಲ್ಲ: ಹೆಚ್ಡಿಕೆ
ಬಿಜೆಪಿ ನಾಲ್ಕು ರಥಯಾತ್ರೆಯ ಮಹಾಸಂಗಮ: ನಂತರ ಬೆಂಗಳೂರಿಗೆ ವಾಪಸ್ಸಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಕೃಷ್ಣರಾಜಪುರ ವೈಟ್ ಫೀಲ್ಡ್ ನಡುವಿನ ನೂತನ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದು, ಈ ಮಾರ್ಗದ ಮೊದಲ ಮೆಟ್ರೋದಲ್ಲಿ ಪ್ರಧಾನಿ ಮೋದಿ ಪ್ರಯಾಣಿಸಲಿದ್ದಾರೆ. ನಂತರ ಹೆಲಿಕ್ಯಾಪ್ಟರ್ ಮೂಲಕ ದಾವಣಗೆರೆಗೆ ಪ್ರಯಾಣಿಸಲಿರುವ ಮೋದಿ ಮಧ್ಯಾಹ್ನ 3.30ಕ್ಕೆ ಬಿಜೆಪಿ ನಾಲ್ಕು ರಥಯಾತ್ರೆಯ ಮಹಾಸಂಗಮದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಚುನಾವಣಾ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆಯುವ ಭಾಷಣ ಮಾಡಲಿದ್ದಾರೆ. ದಾವಣಗೆರೆ ಕಾರ್ಯಕ್ರಮ ಮುಗಿಸಿ ಶಿವಮೊಗ್ಗಕ್ಕೆ ತೆರಳಲಿರುವ ಮೋದಿ ಕುವೆಂಪು ವಿಮಾನ ನಿಲ್ದಾಣದಿಂದ ನವದೆಹಲಿಗೆ ತೆರಳಲಿದ್ದಾರೆ.
ಇದನ್ನೂ ಓದಿ : ದಾವಣಗೆರೆ ಮಹಾಸಂಗಮ: ಜನರ ಮಧ್ಯದಲ್ಲಿ ವೇದಿಕೆಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ... ಹೇಗಿದೆ ಗೊತ್ತಾ ಬಿಗಿ ಭದ್ರತೆ?
ಮೋದಿ ಬೆನ್ನಲ್ಲೇ ಚಾಣಕ್ಯ ಆಗಮನ : ಇಂದಷ್ಟೇ ಬೆಂಗಳೂರು ಪ್ರವಾಸ ಮುಗಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ನಂತರ ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮಾರ್ಚ್ 26 ರಂದು ರಾಜ್ಯಕ್ಕೆ ಮತ್ತೆ ಆಗಮಿಸಲಿರುವ ಬಿಜೆಪಿ ಚಾಣಕ್ಯ ಬೀದರ್ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ : ಬಿಜೆಪಿ ಪಕ್ಷ ಪಾಕಿಸ್ತಾನದಲ್ಲಿದ್ದೆಯಾ?... ಸ್ವಾಭಿಮಾನಿ ಪದ ಬಳಸಬೇಡಿ ಎಂದ ರವೀಂದ್ರ ವಿರುದ್ಧ ಸುಮಲತಾ ಕಿಡಿ
ಸಂಘಟನಾತ್ಮಕ ವಿಚಾರಗಳ ಕುರಿತು ಮಹತ್ವದ ಸಭೆ: ಈ ಬಾರಿ ಕಲ್ಯಾಣ ಕರ್ನಾಟಕವನ್ನು ಕೇಂದ್ರೀಕರಿಸಿ ಪ್ರವಾಸ ಮಾಡುತ್ತಿದ್ದಾರೆ. ನಂತರ ಬೆಂಗಳೂರು ಹಬ್ಬದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿದ್ದು, ಅಧಿಕೃತ ಕಾರ್ಯಕ್ರಮದ ನಂತರ ರಾತ್ರಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಬಹುತೇಕ ಸರ್ಕಾರಿ ಕಾರ್ಯಕ್ರಮಗಳು ಅಂದು ಮುಕ್ತಾಯಗೊಳ್ಳಲಿದ್ದು, ಚುನಾವಣಾ ದಿನಾಂಕ ಘೋಷಣೆಗೂ ಮೊದಲು ಸಂಘಟನಾತ್ಮಕ ವಿಚಾರಗಳ ಕುರಿತು ಮಹತ್ವದ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ನಾಳೆ ಕರ್ನಾಟಕಕ್ಕೆ ಪ್ರಧಾನಿ ಮೋದಿ: ಈ ವರ್ಷ ಏಳನೇ ಭೇಟಿ