ಬೆಂಗಳೂರು: ನಿನ್ನೆ ರಾತ್ರಿ ಖ್ಯಾತ ನೇತ್ರ ತಜ್ಞ, ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ಕೆ ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದರು. ಇಂದು ಅವರ ಅಂತ್ಯಕ್ರಿಯೆ ನಗರದ ಹರಿಶ್ಚಂದ್ರ ಘಾಟ್ನಲ್ಲಿ ನೆರವೇರಿತು. ಶುಕ್ರವಾರ ರೋಗಿಗಳನ್ನು ನೋಡಿ ಸಂಜೆ ಮನೆಗೆ ತೆರಳಿದ್ದ ಅವರಿಗೆ ತೀವ್ರ ಹೃದಯಾಘಾತ ಉಂಟಾಗಿತ್ತು. ತಕ್ಷಣ ಅವರನ್ನು ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾಜಾಜಿನಗರದಲ್ಲಿನ ಇಸ್ಕಾನ್ ಬಳಿಯಿರುವ ನಾರಾಯಣ ನೇತ್ರಾಲಯದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.
ನೇತ್ರದಾನದ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದ ಡಾಕ್ಟರ್ ಭುಜಂಗ ಶೆಟ್ಟಿ ಅವರ ಪಾರ್ಥಿವ ಶರೀರಕ್ಕೆ ಸಿಬ್ಬಂದಿ, ಅಭಿಮಾನಿಗಳು ಕುಟುಂಬಸ್ಥರು ಅಂತಿಮ ನಮನವನ್ನು ಅವರ ಕನಸಿನ ಕೂಸಾದ ನಾರಾಯಣ ನೇತ್ರಾಲಯದಲ್ಲಿ ಸಲ್ಲಿಸಿದರು. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಕರ್ನಾಟಕ ರಕ್ಷಣಾ ವೇದಿಕೆಯ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ಚಿತ್ರನಟ ದೊಡ್ಡಣ್ಣ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ನಂತರ ಮಧ್ಯಾಹ್ನ 3.30ರ ಸುಮಾರಿಗೆ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ ಸಕಲ ವಿಧಿ ವಿಧಾನದೊಂದಿಗೆ ನೆರೆವೇರಿತು.
1978 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದಿದ ಅವರು 1982ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ಆಪ್ತಾಲ್ಮೀಕ್ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರದ ರೆಸಿಡೆನ್ಸಿ ಮಾಡಿದರು. 80 ರ ದಶಕದಲ್ಲಿ ಸಣ್ಣ ಕ್ಲಿನಿಕ್ ಪ್ರಾರಂಭಿಸಿ ತದ ನಂತರ ಕರ್ನಾಟಕದ ಅತಿದೊಡ್ಡ ನಾರಾಯಣ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸ್ಥಾಪಿಸಿದರು. ಅವರು ತಜ್ಞ ಕಣ್ಣಿನ ಪೊರೆ ಮತ್ತು ಫಾಕೋ ಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸಿದ್ದರು. ಪವರ್ ಆಫ್ ಲವ್ ಎನ್ನುವ ಜನಪ್ರಿಯ ಪುಸ್ತಕ ಕೂಡ ಹೊರ ತಂದಿದ್ದರು.
ಡಾ. ಕೆ ಭುಜಂಗ ಶೆಟ್ಟಿ ಅವರು ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿ ಸಂಸ್ಥೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಿದ್ದರು. ತಮ್ಮ ಸಂಸ್ಥೆಯ ಮೂಲಕ ಅದೆಷ್ಟೋ ಜನರಿಗೆ ದೃಷ್ಟಿದೀಪವಾಗಿದ್ದರು. ಭುಜಂಗ ಶೆಟ್ಟಿ ಅವರ ಆರೋಗ್ಯ ಕ್ಷೇತ್ರದ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ. ಡಾ. ರಾಜ್ ಕುಮಾರ್ ಅವರ ತಂಗಿಯ ಕಣ್ಣಿನ ಚಿಕಿತ್ಸೆಗಾಗಿ ನಾರಾಯಣ ನೇತ್ರಾಲಯಕ್ಕೆ ಹೋದಾಗ, ಅವರಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮುಡಿಸಿ, ಅಣ್ಣಾವ್ರ ಹೆಸರಿನಲ್ಲಿ ನೇತ್ರದಾನ ನೋಂದಣಿ ಸಂಸ್ಥೆ ಪ್ರಾಂಭಕ್ಕೆ ಕಾರಣಕರ್ತರಾದವರು ಡಾ. ಭುಜಂಗ ಶೆಟ್ಟಿ.
ಅಷ್ಟೇ ಅಲ್ಲದೆ ಡಾ ರಾಜ್ ಕುಮಾರ್ ಹಾಗೂ ಅವರ ಪುತ್ರ ಪುನೀತ್ ರಾಜ್ ಕುಮಾರ್ ಅವರು ನಿಧರಾದಾಗ ಅವರ ಕಣ್ಣುಗಳಿಂದ ಅನೇಕರಿಗೆ ದೃಷ್ಟಿ ಬರುವಂತೆ ಮಾಡಿದವರು ಇದೇ ಡಾ ಭುಜಂಗ ಶೆಟ್ಟಿ ಅವರು. ಇವರ ಸೇವೆಗೆ ಚಿತ್ರರಂಗದ ಅನೇಕರು ಮಾತ್ರವಲ್ಲದೆ ಅದೆಷ್ಟೋ ಮಂದಿ ಚಿರಋಣಿಯಾಗಿದ್ದಾರೆ.
ಇದನ್ನೂ ಓದಿ: ನಾರಾಯಣ ನೇತ್ರಾಲಯದ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾಕ್ಟರ್ ಭುಜಂಗ ಶೆಟ್ಟಿ ವಿಧಿವಶ