ಬೆಂಗಳೂರು : ಸೂಕ್ತ ಸ್ಥಾನಮಾನದ ಭರವಸೆಯ ಮೇಲೆಯೇ ನಾವು 17 ಜನ ಬಿಜೆಪಿಗೆ ಬಂದಿದ್ದೇವೆ. ಎಲ್ಲರಿಗೂ ಒಳ್ಳೆಯದೇ ಆಗಲಿದೆ ಎಂದು ಕೆಆರ್ ಪೇಟೆ ಶಾಸಕ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಳಂಬಕ್ಕೆ ಹಲವು ಕಾರಣಗಳಿವೆ, ಮೊದಲು ಸಂಕ್ರಾಂತಿ ಹಬ್ಬ, ನಂತರ ದೆಹಲಿ ಚುನಾವಣೆ ಎದುರಾಯಿತು. ಹಾಗಾಗಿ ವರಿಷ್ಠರು ಬ್ಯುಸಿಯಾಗಿದ್ದರು ಇನ್ನೊಂದೆರಡು ದಿನದಲ್ಲಿ ದೆಹಲಿ ಚುನಾವಣೆ ಮುಗಿಯಲಿದ್ದು, ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚಿಸಿ ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರ ಉತ್ತಮವಾಗಿ ನಡೆಯಲಿದೆ ನಾವು ಬಿಎಸ್ವೈ ಹಾಗೂ ಸರ್ಕಾರಕ್ಕೆ ಶಕ್ತಿ ತುಂಬಲು ಬಂದಿದ್ದೇವೆಯೇ ಹೊರತು ಗೊಂದಲ ಸೃಷ್ಟಿ ಮಾಡಲು ಅಲ್ಲ, ಸರ್ಕಾರಕ್ಕೆ ನಮ್ಮಿಂದ ಗೊಂದಲವಾಗಲ್ಲ ಎನ್ನುವ ಅಭಯ ನೀಡಿದರು.
ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ಎನ್ನುವ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ನಾರಾಯಣಗೌಡ, ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎನ್ನುವುದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಆದರೆ 17 ಜನಕ್ಕೂ ಸೂಕ್ತ ಸ್ಥಾನಮಾನ ಸಿಗುವ ಭರವಸೆ ಇದೆ, ಅದೇ ಭಾವನೆಯಲ್ಲಿಯೇ ನಾವು ಬಿಜೆಪಿಗೆ ಬಂದಿದ್ದೇವೆ ಎಲ್ಲರಿಗೂ ಒಳ್ಳೆಯದಾಗಲಿದೆ ಎಂದರು.