ಬೆಂಗಳೂರು: ನಮ್ಮ ಮೆಟ್ರೋ ನಿರಂತರವಾಗಿ ಸಾರ್ವಜನಿಕ ಸೇವೆ ನೀಡುತ್ತಾ ಬಂದಿದ್ದು, ಇಂದಿಗೆ ಹತ್ತು ವರ್ಷ ಪೂರೈಸಿ ಮುನ್ನೆಡೆಯುತ್ತಿದೆ. ಪ್ರತಿಯೊಬ್ಬ ಬೆಂಗಳೂರಿಗರಿಗೂ ಇದು ಹೆಮ್ಮೆಯ ಕ್ಷಣವಾಗಿದ್ದು, ಇಂದು ಬಿಎಂಆರ್ಸಿಎಲ್, ಸಿಲಿಕಾನ್ ಸಿಟಿ ಜನರಿಗೆ 10 ವರ್ಷಗಳ ಸಾರ್ವಜನಿಕ ಸೇವೆಯನ್ನು ಯಶ್ವಸಿಯಾಗಿ ಪೂರೈಸಿದೆ.
ಸಾಕಷ್ಟು ಏಳು - ಬೀಳುಗಳ ನಡುವೆ ಜನರ ಬೆಂಬಲದಿಂದ ಮುಂದೆ ಸಾಗಿದೆ. ಭವಿಷ್ಯದಲ್ಲಿ ಬಿಎಂಆರ್ಸಿಎಲ್ಗೆ ಕನಸು ಸಾಧಿಸಲು ಪ್ರತಿ ವಿಭಾಗದಿಂದ ಬೆಂಬಲ ಮತ್ತು ಸಹಕಾರದ ಅಗತ್ಯವಿದೆ. ಅದು ಹೀಗೆ ಮುಂದುವರಿಯಲಿ ಎಂದು ನಮ್ಮ ಮೆಟ್ರೋ ಎಂಡಿ ಅಂಜುಮ್ ಪರ್ವೇಜ್ ಸಂತಸ ವ್ಯಕ್ತಪಡಿಸಿದರು.
ಹೇಗಿತ್ತು ನಮ್ಮ ಮೆಟ್ರೋ ಪ್ರಯಾಣ?:
ರಾಜಧಾನಿಗೆ ಮೆಟ್ರೋ ಸೇವೆ ಬರಲು ಸ್ವಲ್ವ ವಿಳಂಬವಾದರೂ ಅಚ್ಚುಕಟ್ಟಾಗಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೆಟ್ರೋ ಸೇವೆಯಿಂದ ಜನತೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಪಡೆದಿದ್ದು, ಜನರ ಸಮಯವನ್ನು ಉಳಿತಾಯ ಮಾಡುವಲ್ಲಿ ಸಹಾಯಕವಾಗಿದೆ.
ಬೈಯಪ್ಪನಹಳ್ಳಿ ಮತ್ತು ಮಹಾತ್ಮ ಗಾಂಧಿ ರಸ್ತೆಗಳ( ಎಂಜಿ ರೋಡ್) ನಡುವಿನ ಮೊದಲ ಹಂತದ ಸಂಚಾರವು 2011ರ ಅಕ್ಟೋಬರ್ 20 ರಂದು ಆರಂಭವಾಯಿತು.
- ರೀಚ್ 1 ರ (ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ) ವಾಣಿಜ್ಯ ಕಾರ್ಯಾಚರಣೆಯು 20ನೇ ಅಕ್ಟೋಬರ್ 2011 ರಂದು ಪ್ರಾರಂಭ
- ರೀಚ್ 3 ರ (ಪೀಣ್ಯ ಕೈಗಾರಿಕಾ ಪ್ರದೇಶದ ದಿಂದ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯವರೆಗೆ) ವಾಣಿಜ್ಯ ಕಾರ್ಯಾಚರಣೆ 1ನೇ ಮಾರ್ಚ್ 2014 ರಿಂದ ಆರಂಭ
- ರೀಚ್ 3ಬಿ (ನಾಗಸಂಧ್ರ ದಿಂದ ಪೀಣ್ಯ ಕೈಗಾರಿಕಾ ಪ್ರದೇಶದ ವರೆಗೆ) ವಾಣಿಜ್ಯ ಕಾರ್ಯಾಚರಣೆ 1ನೇ ಮೇ 2015 ರಿಂದ ಆರಂಭ
- ರೀಚ್ 2 ರ (ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯವರೆಗೆ) ವಾಣಿಜ್ಯ ಕಾರ್ಯಾಚರಣೆ 15ನೇ ನವಂಬರ 2015 ರಿಂದ ಪ್ರಾರಂಭ
ನಮ್ಮ ಮೆಟ್ರೋ ಇಡೀ ಭಾರತದಲ್ಲೇ ಸ್ಟ್ಯಾಂಡರ್ಡ್ ಗೇಜ್ ಮೇಲೆ 750ವಿ ಡಿಸಿ ಥರ್ಡ್ ರೈಲ್ ಸಹಿತ ಕಾರ್ಯ ನಿರ್ವಹಿಸುತ್ತಿರುವ ಪ್ರಪ್ರಥಮ ಮೆಟ್ರೋ ರೈಲು ಯೋಜನೆಯಾಗಿದೆ.
ಲಕ್ಷಕ್ಕೂ ಅಧಿಕ ಮಂದಿಯಿಂದ ಮೆಟ್ರೋ ಬಳಕೆ :
ಆರಂಭದಲ್ಲಿ ಸಾವಿರ ಲೆಕ್ಕದಲ್ಲಿ ಆರಂಭವಾದ ಪ್ರಯಾಣಿಕರ ಸಂಖ್ಯೆ ನಂತರ ನಿತ್ಯ 4.5 ಲಕ್ಷ ಜನರು ಮೆಟ್ರೋ ಸೇವೆ ಬಳಸುತ್ತಿದ್ದಾರೆ. ವಾರ್ಷಿಕ ಅಂದಾಜು 13.30 ಕೋಟಿ ಜನ ಪ್ರಯಾಣಿಸುತ್ತಿದ್ದಾರೆ. ಕೊರೊನಾ ಸೋಂಕು ಹರಡಿದ ನಂತರ ಸೇವೆ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ಸೇವೆ ಆರಂಭಿಸಿದ್ದು, ನಿತ್ಯ ಸರಾಸರಿ 55 ಸಾವಿರ ಜನರು ಮೆಟ್ರೋ ಸೇವೆ ಪಡೆಯುತ್ತಿದ್ದಾರೆ.
ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ:
ಉದ್ದ ಹಾಗೂ ನಿಲ್ದಾಣಗಳ ವ್ಯವಸ್ಥೆಯನ್ನು ಪರಿಗಣಿಸಿದರೆ ನವದೆಹಲಿಯನ್ನು ಹೊರತು ಪಡಿಸಿ ನಮ್ಮ ಮೆಟ್ರೋ ನಂತರದ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಮೊದಲ ಅಂಡರ್ ಮೆಟ್ರೋ ವ್ಯವಸ್ಥೆಯನ್ನು ಹೊಂದಿದೆ. ಇನ್ನೂ ವಿಶೇಷವೆಂದರೆ ಬಸ್ಗಳಲ್ಲಿ ಮಹಿಳಾ ಸೀಟು ಮೀಸಲಾತಿ ಇರುತ್ತೋ ಹಾಗೆ ನಮ್ಮ ಮೆಟ್ರೋದಲ್ಲಿ ಒಂದು ಬೋಗಿ ಸಂಪೂರ್ಣವಾಗಿ ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ.. ಮನೆಯಿಂದ ಹೊರಬರುತ್ತಿದ್ದ ಹೊಗೆಯಿಂದ ಪ್ರಕರಣ ಬೆಳಕಿಗೆ