ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಂಸದ ನಳೀನ್ ಕುಮಾರ್ ಕಟೀಲ್ ನಾಳೆ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಹಾಲಿ ಅಧ್ಯಕ್ಷರಾಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.
ಇಂದು ರಾತ್ರಿಯೇ ಬೆಂಗಳೂರಿಗೆ ಆಗಮಿಸಲಿರುವ ಸಂಸದ ನಳೀನ್ ಕುಮಾರ್ ಕಟೀಲ್ ನಾಳೆ ಅಧಿಕಾರ ಸ್ವೀಕಾರ ಮಾಡಲಿದ್ದು, ನಂತರ ಬಿಜೆಪಿ ರಾಜ್ಯ ಘಟಕದಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿರುವ ಪದಾಧಿಕಾರಿಗಳ ಬದಲಾವಣೆ ಮಾಡುತ್ತಾರೆ ಎನ್ನಲಾಗಿದೆ.
ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲು ಸಿಎಂ ಯಡಿಯೂರಪ್ಪ ಪ್ರಯತ್ನ ನಡೆಸಿದ್ದರಾದರೂ ಲಿಂಬಾವಳಿ ಅದಕ್ಕೆ ಸಿದ್ಧರಿರಲಿಲ್ಲ. ಯಡಿಯೂರಪ್ಪ ನೀಡಿದ್ದ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಅದರ ಬೆನ್ನಲ್ಲೇ ಹೊಸಬರ ಹುಡುಕಾಟಕ್ಕೆ ಸಿಎಂ ಮುಂದಾಗುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಶಾಕ್ ರೀತಿ ಸಂಸದ ನಳೀನ್ ಕುಮಾರ್ ಕಟೀಲ್ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.
ಇದರ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೈವಾಡ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಯಡಿಯೂರಪ್ಪ ತಮ್ಮ ಆಪ್ತ ಸದಾನಂದಗೌಡಗೌಡ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಪಕ್ಷದಲ್ಲಿ ಹಿಡಿತ ಸಾಧಿಸಿದ್ದರು.
ಇದರಿಂದಾಗಿ ಸಾಕಷ್ಟು ಸಮಸ್ಯೆಗಳು, ಅಸಮಾಧಾನಗಳು ಸ್ಫೋಟಗೊಂಡಿದ್ದವು. ಹೀಗಾಗಿ ಈ ಬಾರಿ ಪಕ್ಷದ ಮೇಲೆ ಯಡಿಯೂರಪ್ಪ ಅವರ ಪೂರ್ಣ ನಿಯಂತ್ರಣಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಸ್ವತಃ ರಾಜ್ಯಾಧ್ಯಕ್ಷರ ನೇಮಕ ಮಾಡಿದೆ ಎಂದು ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಲೋಕಸಭೆ ಸದಸ್ಯ ನಳೀನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರದ ಸಚಿವ ಸಂಪುಟ ವಿಸ್ತರಣೆ ನಡೆದ ಬೆನ್ನಲ್ಲೇ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರನ್ನು ಅಮಿತ್ ಶಾ ನೇಮಕ ಮಾಡಿದ್ದಾರೆ.
ರಾಜ್ಯ ಬಿಜೆಪಿಗೆ ಅಧ್ಯಕ್ಷರಾಗಲು ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಆರ್.ಅಶೋಕ್ ಸೇರಿದಂತೆ ಹಲವು ಹಿರಿಯ ನಾಯಕರು ತೀವ್ರ ಪೈಪೋಟಿ ನಡೆಸುತ್ತಿದ್ದರು. ನಳಿನ್ ಕುಮಾರ್ ಅವರ ಹೆಸರೂ ಸಹ ಆಗಾಗ ಬಿಜೆಪಿ ರಾಜ್ಯಾಧ್ಯಕ್ಷ ರ ಹುದ್ದೆಗೆ ಕೇಳಿಬರುತ್ತಿತ್ತು. ಈಗ ಅದು ನಿಜವಾಗಿದೆ.
ನಳೀನ್ ಕುಮಾರ್ ಕಟೀಲ್ ನೇಮಕ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇಮಕ ಆದೇಶ ಹೊರಡಿಸಿ ಅಮಿತ್ ಶಾ ಅವರ ಆದೇಶದಂತೆ ಈ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಳೀನ್ ಕುಮಾರ್ ಕಟೀಲ್ ನೇಮಕ ತಕ್ಷಣದಿಂದ ಜಾರಿಗೆ ಬಂದಿರುವುದರಿಂದ ಯಡಿಯೂರಪ್ಪನವರು ಅಧ್ಯಕ್ಷ ಸ್ಥಾನವನ್ನು ಈಗ ಬಿಟ್ಟುಕೊಡಬೇಕಾಗಿದೆ.