ಬೆಂಗಳೂರು: ದೆಹಲಿ ಹಿಂಸಾಚಾರದ ಹಿಂದೆ ದಲ್ಲಾಳಿಗಳನ್ನು ಬೆಂಬಲಿಸುವ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಮತ್ತು ದೇಶ ವಿರೋಧಿ ಖಲಿಸ್ತಾನಿ ಶಕ್ತಿಗಳಿವೆ. ಇವೆಲ್ಲ ತಿಳಿದಿದ್ದರೂ ಮಲ್ಲಿಕಾರ್ಜುನ ಖರ್ಗೆಯ ಪ್ರಚಾರಕ್ಕಾಗಿ, ಬಿಜೆಪಿ ಒಳ ಸಂಚಿದೆ ಎಂದು ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದರು.
ಖರ್ಗೆ ಅವರ ಸೋಲಿಗೆ ಅವರ ಪಕ್ಷದವರೇ ಕಾರಣ ಎಂಬುವುದನ್ನು ಕಾಂಗ್ರೆಸ್ ಪಕ್ಷದ ಸತ್ಯ ಶೋಧನಾ ಸಮಿತಿ ತಿಳಿಸಿದೆ. ಕಾಂಗ್ರೆಸ್‍ನಲ್ಲಿ ನಾಯಕರೇ ಇಲ್ಲದ ದುಃಸ್ಥಿತಿ ಇದೆ. ಕುಟುಂಬ ರಾಜಕೀಯಕ್ಕೆ ಜೋತು ಬಿದ್ದ ಆ ಪಕ್ಷ ಅನಿವಾರ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಪ್ರತಿಪಕ್ಷ ನಾಯಕನ ಸ್ಥಾನಮಾನ ನೀಡಿದೆ. ಇದನ್ನು ಅವರು ಅರ್ಥ ಮಾಡಿಕೊಳ್ಳುವುದು ಒಳಿತು ಎಂದರು.
ಓದಿ : ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಯದಿದ್ದರೆ ಬಿಸಿ ಮುಟ್ಟಿಸಬೇಕಾಗುತ್ತದೆ: ಹೆಚ್ಡಿಕೆ ಎಚ್ಚರಿಕೆ
ದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನದಂದು ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯುವುದನ್ನು ಕಾಂಗ್ರೆಸ್ ಪಕ್ಷ ನಿರೀಕ್ಷಿಸಿತ್ತು. ಆ ಗಲಭೆ, ಆಗುವ ಹಾನಿಗೆ ಪೊಲೀಸರು ಮತ್ತು ಪೊಲೀಸ್ ವ್ಯವಸ್ಥೆ ನಿಯಂತ್ರಿಸುವ ಕೇಂದ್ರ ಸರ್ಕಾರವೇ ಕಾರಣ ಎಂದು ದೂರುವ ಉದ್ದೇಶ ಕಾಂಗ್ರೆಸ್ ಪಕ್ಷಕ್ಕೆ ಇತ್ತು ಎಂಬುವುದು ಖರ್ಗೆ ಅವರ ಈ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಕಟೀಲ್ ಆರೋಪಿಸಿದರು.
ಕಾಂಗ್ರೆಸ್ ಪಕ್ಷವು ಒಳಜಗಳದ ಕಾರಣಕ್ಕಾಗಿ ಎಲ್ಲೆಡೆ ಸೋಲುತ್ತಿದೆ. ಆದರೂ, ಕರ್ನಾಟಕದಲ್ಲಿ ಗೆದ್ದು ಅಧಿಕಾರಕ್ಕೇರುವ ಹಗಲು ಗನಸನ್ನು ಆ ಪಕ್ಷದ ನಾಯಕರು ಬಿಟ್ಟಿಲ್ಲ. ಕೇಂದ್ರದ ಜನಪರ ನಾಯಕರು, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ರೈತಪರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯವೈಖರಿಯಿಂದ ಕಾಂಗ್ರೆಸ್ ಪಕ್ಷ ನಿರಂತರವಾಗಿ ನೆಲಕಚ್ಚುತ್ತಿರುವುದನ್ನು ಗಮನಿಸಿ ಕೇವಲ ಪ್ರಚಾರದ ದೃಷ್ಟಿಯಿಂದ ಖರ್ಗೆಯವರು ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದರು.