ಬೆಂಗಳೂರು: ಲೋಕಸಭಾ ಚುನಾವಣೆವರೆಗೂ ಪಕ್ಷದ ಹಾಲಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಮುಂದುವರಿಸುವ ಕುರಿತು ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಅದರಂತೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಮುಂದುವರಿಯಲಿದ್ದಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಜೆಪಿ ಮುಖ್ಯ ವಕ್ತಾರ ಎಂ.ಜಿ ಮಹೇಶ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯ ಜಗನ್ನಾಥ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ದೆಹಲಿಯಲ್ಲಿ ನಡೆಯಿತು. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು 2024 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆವರೆಗೂ ಮುಂದುವರಿಕೆ ಮಾಡುವ ಘೋಷಣೆ ಮಾಡಲಾಯಿತು.
ಮಾಧ್ಯಮಗಳಲ್ಲಿ ಸುದ್ದಿ ಸತ್ಯಕ್ಕೆ ದೂರವಾದ ವಿಚಾರ:ಅದರ ಬೆನ್ನಲ್ಲೇ ಕರ್ನಾಟಕದಲ್ಲಿ ಮಾಧ್ಯಮಗಳಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಗ್ಗೆ ಅನೇಕ ಸುದ್ದಿಗಳು ಬಂದಿದ್ದವು. ಆದರೆ, ಅದು ಸತ್ಯಕ್ಕೆ ದೂರವಾದ ವಿಚಾರ. ನಮ್ಮ ಮುಂದಿನ ಸಂಘಟನಾತ್ಮಕ ವ್ಯವಸ್ಥೆ ಆಗುವವರೆಗೂ ರಾಜ್ಯ ಉಸ್ತುವಾರಿಯಾಗಿ ಅರುಣ್ ಸಿಂಗ್ ಮತ್ತು ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಮುಂದುವರೆಯಲಿದ್ದಾರೆ ಎಂದು ತಿಳಿಸಿದರು.
ಕಟೀಲ್ ಕ್ರಿಯಾಶೀಲರಾಗಿ ರಾಜ್ಯದ ಅಧ್ಯಕ್ಷರಾಗಿ ಎಲ್ಲಾ ಮಂಡಲಗಳಿಗೂ ಐದು ಬಾರಿ ಪ್ರವಾಸ ಮಾಡಿ ಸಂಘಟನೆಯನ್ನು ಬಹಳ ಎತ್ತರಕ್ಕೆ ಕೊಂಡಿಯ್ದಿದ್ದಾರೆ. ಅವರ ನೇತೃತ್ವದಲ್ಲಿ ಬೂತ್ ವಿಜಯ್ ಅಭಿಯಾನ ದೇಶದಲ್ಲೇ ದೊಡ್ಡದಾದ ಸಾಧನೆಯನ್ನು ನಾವು ಮಾಡಿದ್ದೇವೆ. 57 ಸಾವಿರ ಬೂತ್ ಗಳಲ್ಲಿ 49 ಸಾವಿರ ಬೂತ್ ಗಳಿಗೆ ಪ್ರವೇಶ ಮಾಡಿದ್ದೇವೆ.ನಮ್ಮ ಕಾರ್ಯ ವಿಸ್ತಾರವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದೀಗ ಇದಕ್ಕಾಗಿ 10 ದಿನಗಳ ಕಾರ್ಯಕ್ರಮ ವಿಸ್ತರಿಸಿದ್ದು, 36 ಲಕ್ಷ ಮನೆಗಳ ಮೇಲೆ ಪಕ್ಷದ ಧ್ವಜಗಳನ್ನು ಹಾರಿಸಿದ್ದೇವೆ. ಮುಂದುವರೆದ ಭಾಗವಾಗಿ ಪೇಜ್ ಪ್ರಮುಖರನ್ನು ನೇಮಿಸಿದ್ದು, ಇನ್ನು ಕೆಳ ಹಂತಕ್ಕೆ ಕೊಂಡೊಯ್ದು ನಮ್ಮ ಎರಡೂ ಸರ್ಕಾರದ ಸಾಧನೆ ಬಿಂಬಿಸುವ ಮತ್ತು ಪಲಾನುಭವಿಗಳಿಗೆ ಮತ್ತಷ್ಟು ಪ್ರಮಾಣದಲ್ಲಿ ಸರ್ಕಾರದ ಸವಲತ್ತು ಕೊಡುವ ಕೆಲಸ ಮಾಡುತ್ತೇವೆ.
ಸದ್ಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹೊಸ ಬಾಷ್ಯ ಬರೆದಿದ್ದಾರೆ. ಹಾಗಾಗಿ ಅವರು ಚುನಾವಣೆವರೆಗೂ ಮುಂದುವರೆಯಲಿದ್ದಾರೆ. ಯಾವ ಊಹಾಪೋಹಕ್ಕೂ ಅವಕಾಶವಿಲ್ಲ ಎಂದು ಸ್ಪಷ್ಟ ಪಡಿಸಿದರು. ಪಕ್ಷದ ಮುಖ್ಯ ವಕ್ತಾರನಾಗಿ ಈ ವಿಷಯವನ್ನು ಖಚಿತಪಡಿಸುತ್ತಿದ್ದೇನೆ. ಮುಖ್ಯ ವಿಚಾರವಿದ್ದರೆ ನಾನೇ ಮಾಧ್ಯಮಗಳಿಗೆ ತಿಳಿಸುತ್ತೇನೆ. ಇದು ಅಧಿಕೃತ ಮಾಹಿತಿ, ಬೇರೆ ಪಕ್ಷದ ರೀತಿ ಯಾವುದೋ ಕುಟುಂಬಕ್ಕೆ, ಯಾವುದೋ ವಂಶಕ್ಕೆ ತಗಲಾಕಿಕೊಂಡಿರುವ ಪಕ್ಷ ಬಿಜೆಪಿಯಲ್ಲ, ಇಲ್ಲಿ ಒಂದು ವ್ಯವಸ್ಥೆ ಇದೆ ಎಂದರು.
ಪ್ರತಿಯೊಂದಕ್ಕೂ ಸಂವಿಧಾನಧ ಆಧಾರದಲ್ಲೇ ನಮ್ಮಲಿನ ವ್ಯವಸ್ಥೆಯಂತೆ ಎಲ್ಲವೂ ನಡೆಯಲಿದೆ. ಹಾಗಾಗಿ ನಮಗೆ ಅಧಿಕೃತವಾಗಿ ಹೈಕಮಾಂಡ್ ನಿಂದ ಬಂದಿರುವ ಮಾಹಿತಿಯನ್ನು ಪ್ರಕಟಿಸುತ್ತಿದ್ದೇನೆ. ಕಟೀಲ್ ಮತ್ತು ಅರುಣ್ ಸಿಂಗ್ ಮುಂದುವರೆಸುವ ವಿಚಾರ ಅಧಿಕೃತ ಸುದ್ದಿಯಾಗಿದೆ. ಇದನ್ನು ಬಿಟ್ಟು ಬೇರೆ ವದಂತಿಗಳಿಗೆ ಆದ್ಯತೆ ನೀಡಬಾರದು ಎಂದು ಮನವಿ ಮಾಡಿದರು.
ಇದನ್ನೂಓದಿ:ನಾನು ಸ್ಪರ್ಧೆ ಮಾಡೋದು ಒಂದೇ ಕ್ಷೇತ್ರದಿಂದ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ