ಬೆಂಗಳೂರು: ಕಾಂಗ್ರೆಸ್‍ನ ಹಿರಿಯ ನಾಯಕ ಹೆಚ್.ಕೆ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ ಕುರಿತು ನೀಡಿರುವ ಹೇಳಿಕೆಯು ಬಾಲಿಶ ಮತ್ತು ಹತಾಶೆಯ ಪ್ರತಿಬಿಂಬದಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಟೀಲ್, ಇದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ತಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ, ತ್ರಿವಳಿ ತಲಾಖ್ ರದ್ದು, 370ನೇ ವಿಧಿ ರದ್ದು, ಕೋವಿಡ್ ಸಂಕಷ್ಟ ಕಾಲದ ಸಮರ್ಥ ನಿರ್ವಹಣೆ, ಕೋವಿಡ್ ಲಸಿಕೆ ವಿದೇಶಗಳಿಗೂ ರಫ್ತು ಮಾಡುವ ಮೂಲಕ ನರೇಂದ್ರ ಮೋದಿ ವಿಶ್ವದಾದ್ಯಂತ ಮನ್ನಣೆ ಪಡೆದಿದ್ದಾರೆ. ಅಲ್ಲದೆ ಅವರ ಸಾರ್ಥಕ ಸೇವೆಯನ್ನು ಗುರುತಿಸಿ ಅನೇಕ ವಿಶ್ವ ಮಟ್ಟದ ಪ್ರಶಸ್ತಿಗಳನ್ನೂ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಲಸಿಕೆಯನ್ನು ವಿಶ್ವದ ಅನೇಕ ದೇಶಗಳಿಗೆ ಸರಬರಾಜು ಮಾಡುವ ಮೂಲಕ ವಿಶ್ವವೇ ಒಂದು ಕುಟುಂಬ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಅವರ ವೇಷಭೂಷಣ ಮತ್ತು ಹಾವಭಾವಗಳನ್ನು ನೆನಪಿಸಿಕೊಂಡು ಹೆಚ್.ಕೆ ಪಾಟೀಲರಂತ ಹಿರಿಯ ಕಾಂಗ್ರೆಸ್ಸಿಗರು ಕೀಳುಮಟ್ಟದ ಮಾತನ್ನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ನರೇಂದ್ರ ಮೋದಿ ವ್ಯಕ್ತಿತ್ವ, ಸಮರ್ಥ ಕಾರ್ಯನಿರ್ವಹಣೆಯನ್ನು ಜನಸಾಮಾನ್ಯರೂ ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಈ ಮಾದರಿಯ ಹೇಳಿಕೆಯಿಂದ ನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೆ ಧಕ್ಕೆ ಆಗುವುದಿಲ್ಲ. ರವೀಂದ್ರನಾಥ್ ಟಾಗೋರ್, ಸುಭಾಷ್‍ಚಂದ್ರ ಬೋಸ್, ಅತ್ಯುತ್ತಮ ಸಂವಿಧಾನವನ್ನು ಜನರಿಗೆ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನಚರಿತ್ರೆ, ಚಿಂತನೆ ಮತ್ತು ಆದರ್ಶಗಳಿಂದ ನರೇಂದ್ರ ಮೋದಿಯವರು ಪ್ರಭಾವಿತರಾಗಿರುವುದು ಸಹಜ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದವರಿಗೆ ಕಳೆದ ಆರೇಳು ವರ್ಷಗಳಿಂದ ಟೀಕೆ ಮಾಡಲು ನರೇಂದ್ರ ಮೋದಿ ಉಡುಪು, ಕೇಶವಿನ್ಯಾಸ ಮತ್ತು ಹಾವಭಾವ ಬಿಟ್ಟರೆ ಬೇರೇನೂ ಸಿಗುತ್ತಿಲ್ಲ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎಂಬ ಸ್ಥಿತಿಗೆ ಕಾಂಗ್ರೆಸ್ ಮುಖಂಡರು ತಲುಪಿದ್ದಾರೆ ಎಂದು ಕಟೀಲ್ ಟೀಕಿಸಿದ್ದಾರೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಪ್ರಶ್ನಿಸಿ ಅರ್ಜಿ: ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಸರ್ಕಾರ