ಬೆಂಗಳೂರು: ಬೆಂಗಳೂರು ಉಗ್ರರ ತಾಣ ಆಗುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನೀಡಿದ್ದ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮರ್ಥಿಸಿಕೊಂಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಗಲಭೆಗಳ ಹಿನ್ನೆಲೆಯಲ್ಲಿ ಈ ರೀತಿ ಹೇಳಿದ್ದಾರೆ ಅಷ್ಟೇ, ಸಿಲಿಕಾನ್ ಸಿಟಿ ಉಗ್ರ ಚಟುವಟಿಕೆ ನಡೆಸುವವರ ಅಡಗುದಾಣ ಆಗುತ್ತಿದೆ ಎಂದು ಹಲವಾರು ವರದಿಗಳು ಹಿಂದೆ ವರದಿಯಾಗಿದೆ. ಅಡಗುದಾಣದಂತಹ ಘಟನೆ ನಡೆದಿವೆ ಹಾಗಾಗಿ ಉಗ್ರರ ಅಡಗುದಾಣ ಆಗಿರುವ ಸಂಭವ ಇದೆ ಎಂದು ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದರು.
ಇದೇ ವೇಳೆ ಬಾಬ್ರಿ ಮಸೀದಿ ತೀರ್ಪಿನ ವಿಚಾರವಾಗಿ ಪ್ರತಿಕ್ರಿಯಿಸಿ, ಬಾಬ್ರಿ ಮಸೀದಿ ತೀರ್ಪು ಬಂದಿದೆ, ಆ ಕಾಲಘಟ್ಟದಲ್ಲಿ ನಡೆದಿದ್ದ ಘಟನೆ ಪೂರ್ವ ನಿಯೋಜಿತ ಘಟನೆ ಅಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿ ಎಲ್ಲರನ್ನೂ ಖುಲಾಸೆಗೊಳಿಸಿರುವುದನ್ನು ಸ್ವಾಗತ ಮಾಡುತ್ತೇವೆ. ಅಂದು ಘಟನೆ ನಡೆದಾಗ ಕಾಂಗ್ರೆಸ್ ಸರ್ಕಾರ ಇತ್ತು, ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು, ವೋಟ್ ಬ್ಯಾಂಕ್ ರಾಜಕಾರಣ ಮಾಡಿತ್ತು ಈಗಲೂ ಅದನ್ನೇ ಮಾಡುತ್ತಿದೆ ಆದರೆ ಅದಕ್ಕೆಲ್ಲಾ ಈಗ ನ್ಯಾಯಾಲಯವೇ ಉತ್ತರ ಕೊಟ್ಟಿದೆ ಎಂದರು.
ಕೇಂದ್ರ ಹಾಗು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂದ ಮಾತ್ರಕ್ಕೆ ಎಸ್ಡಿಪಿಐ ನಿಷೇಧಿಸಿಬಿಡಲು ಸಾಧ್ಯವಿಲ್ಲ, ಅದು ಕೇವಲ ಸಂಘಟನೆಯಲ್ಲ ರಾಜಕೀಯ ಪಕ್ಷವಾಗಿದೆ ಹಾಗಾಗಿ ಕಾನೂನಿನ ಪೂರ್ವ ತಯಾರಿ ಮಾಡಿಕೊಂಡು ಏನು ಮಾಡಬೇಕೋ ಮಾಡಲಿದ್ದೇವೆ ಎಂದರು.