ಬೆಂಗಳೂರು: ಮಡಿಕೇರಿ ನಗರಸಭೆಯ 23 ವಾರ್ಡ್‍ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಈ ಫಲಿತಾಂಶ ಸಂತಸ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಒಟ್ಟು 23 ಸ್ಥಾನಗಳ ಪೈಕಿ 16 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನ ಪಡೆಯುವ ಮೂಲಕ ಹೀನಾಯ ಸೋಲು ಅನುಭವಿಸಿವೆ. ಐದು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಎಸ್ಡಿಪಿಐ ಎರಡನೇ ಸ್ಥಾನ ಗಳಿಸಿದೆ.
ಬಿಜೆಪಿ ಸಾಧನೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳಿಗೆ ಸಿಕ್ಕ ಜಯವಾಗಿದೆ ಎಂದರು.
ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದಾರೆ. ಅವರನ್ನು ಮತ್ತು ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ಸಂತಾಪ...
ದೇಶದ ಮಾಜಿ ಅಟಾರ್ನಿ ಜನರಲ್ ಮತ್ತು ಖ್ಯಾತ ಅಂತಾರಾಷ್ಟ್ರೀಯ ನ್ಯಾಯವಾದಿ ಸೋಲಿ ಸೊರಾಬ್ಜಿ ಅವರ ನಿಧನಕ್ಕೆ ನಳಿನ್‍ಕುಮಾರ್ ಕಟೀಲ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಕಾನೂನು ತಜ್ಞರಾದ ನ್ಯಾ.ಸೋಲಿ ಸೊರಾಬ್ಜಿ ನಿಧನದಿಂದ ನ್ಯಾಯಾಂಗ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಸೊರಾಬ್ಜಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿತ್ತು. ಅವರು ಮೊದಲ ಬಾರಿಗೆ 1989ರಲ್ಲಿ ಮತ್ತು ನಂತರ 1998ರಿಂದ 2004ರವರೆಗೆ ಭಾರತದ ಅಟಾರ್ನಿ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು. ಮಾನವ ಹಕ್ಕುಗಳ ವಕೀಲರಾಗಿಯೂ ಅವರು ಪ್ರಸಿದ್ಧರಾಗಿದ್ದರು ಎಂದು ತಿಳಿಸಿದರು.
ಅವರ ಕುಟುಂಬ ವರ್ಗ, ಬಂಧುವರ್ಗ, ಅಭಿಮಾನಿಗಳು ಮತ್ತು ಸ್ನೇಹಿತರಿಗೆ ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ನಳಿನ್ ಕುಮಾರ್ ಕಟೀಲ್ ಪ್ರಾರ್ಥಿಸಿದ್ದಾರೆ.