ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ನಡೆದಿರುವ ಮತ್ತೊಂದು ಬೃಹತ್ ಹಗರಣ ಬಯಲಾಗಿದ್ದು, ಹಗರಣಕ್ಕೆ ಸಂಬಂಧಿಸಿದ 9,630 ಪುಟಗಳಷ್ಟು ಸಂಪೂರ್ಣ ದಾಖಲೆಗಳನ್ನು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎನ್.ಆರ್. ರಮೇಶ್ ಬಿಡುಗಡೆ ಮಾಡಿದ್ದಾರೆ. ಸೋಮವಾರ ಬಿಬಿಎಂಪಿ ಕಚೇರಿ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಬೃಹತ್ ಹಗರಣದಲ್ಲಿ ಬಿಬಿಎಂಪಿ ಹಾಗೂ BMICAPA ಯ ಹಲವು ಭ್ರಷ್ಟ ಅಧಿಕಾರಿಗಳು ಭಾಗಿಯಾಗಿದ್ದಾರೆ. TDR ಮಾಫಿಯಾದ ದೊರೆ ಎಂದೇ ಕುಖ್ಯಾತಿ ಪಡೆದಿರುವ ಪ್ರವೀಣ್ ಪಿ. ಷಾ ರವರು ಪಾಲುದಾರನಾಗಿರುವ M/s ವೆಂಕಟೇಶ್ವರ ಡೆವಲಪರ್ಸ್ ಎಂಬ ಸಂಸ್ಥೆ, ವಿಕ್ರಮ್ ಓಸ್ವಾಲ್ ಎಂಬ ಮತ್ತೊಬ್ಬ TDR ಮಾಫಿಯಾ ತಂಡದ ಸದಸ್ಯ ಪಾಲುದಾರನಾಗಿರುವ M/s ಬಾಲಾಜಿ ಇನ್ಫ್ರಾಸ್ಟ್ರಕ್ಚರ್ & ಡೆವಲಪರ್ಸ್ ಎಂಬ ಸಂಸ್ಥೆ, C. T. ತಿಮ್ಮಯ್ಯ ಮತ್ತು C. T. ಮರಿರಾಜು ರವರುಗಳು ಭ್ರಷ್ಟ ಅಧಿಕಾರಿಗಳ ಜೊತೆ ಸೇರಿ ನಡೆಸಿರುವ ಬೃಹತ್ ಹಗರಣ ಎಂದರು.
TDR ಮಾಫಿಯಾದ ಸದಸ್ಯರುಗಳು ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ “ಕೊಡಿಯಾಲ ಕರೇನಹಳ್ಳಿ” ಎಂಬ ಗ್ರಾಮದ ಸರ್ವೆ ನಂ: 384, 532, 537, 538, 543, 544, 545 ಮತ್ತು 546 ರ ಒಟ್ಟು 40.09 ಎಕರೆ (17,52,201 ಚ. ಅಡಿ) ಗಳಷ್ಟು ವಿಸ್ತೀರ್ಣದ ಸ್ವತ್ತನ್ನು ಅಲ್ಲಿನ ರೈತರಿಂದ 2011-12 ರಲ್ಲಿ ಕೆಲವೇ ಲಕ್ಷ ರೂ. ಗಳಿಗೆ ಕ್ರಯಕ್ಕೆ ಪಡೆಯುತ್ತಾರೆ. ಅದಾದ ನಂತರ ಇವರುಗಳು ಸದರಿ ಸ್ವತ್ತಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ “ತ್ಯಾಜ್ಯ ಸಂಸ್ಕರಣಾ ಘಟಕ”ವನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ರಮೇಶ್ ಆರೋಪಿಸಿದರು.
ಈ ಸ್ವತ್ತನ್ನು “ಬೆಂಗಳೂರು - ಮೈಸೂರು ಮೂಲಭೂತ ಸೌಕರ್ಯ ಮಾರ್ಗ ಯೋಜನಾ ಪ್ರಾಧಿಕಾರ (Bengaluru - Mysuru Infrastructure Corridor Area Planning Authority - BMICAPA)” ದ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ಸಲ್ಲಿಸುವುದರ ಜೊತೆಗೆ, ಅದರ ಬದಲಾಗಿ ಸದರಿ ಸ್ವತ್ತಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಳಸಲು TDR ನೀಡಬೇಕೆಂಬ ಷರತ್ತನ್ನು ವಿಧಿಸಿದ್ದರು. ಮೇಲ್ನೋಟಕ್ಕೆ ಈ ಪ್ರಸ್ತಾವನೆಯನ್ನು ನೋಡಿದವರಿಗೆ, ಮೇಲೆ ತಿಳಿಸಿರುವ ನಾಲ್ವರು ಪಾಲಿಕೆಗೆ 40.09 ಎಕರೆ ವಿಸ್ತೀರ್ಣದ ಸ್ವತ್ತನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉಚಿತವಾಗಿ ನೀಡುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ. ಅವರ ಪ್ರಸ್ತಾವನೆಯ ಹಿಂದೆ ಇದ್ದಂತಹ “ಬೃಹತ್ ಮಟ್ಟದ ಮಹಾ ವಂಚನೆಯ ಕ್ರಿಮಿನಲ್ ಯೋಜನೆ”ಯ ದುರುದ್ದೇಶ ಯಾರ ಊಹೆಗೂ ನಿಲುಕದ್ದು ಎಂದು ಅವರು ದೂರಿದರು.
“ಯಾವುದೇ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನೀಡಲಾಗುವ TDR (Transfer of Development Rights) ಅನ್ನು ಅದೇ ಪ್ರಾಧಿಕಾರದ ವ್ಯಾಪ್ತಿಯಲ್ಲೇ ಬಳಸಬೇಕು” ಎಂಬ ನಿಯಮವು “Karnataka Town & Country Planning Act (KTCP ಕಾಯ್ದೆ)” ಯಲ್ಲಿ ಅತ್ಯಂತ ಸ್ಪಷ್ಟವಾಗಿದೆ. ಆದರೆ, ಪಾಲಿಕೆಯ ಹಿರಿಯ ಅಧಿಕಾರಿಗಳು ಮತ್ತು BMICAPA ಅಧಿಕಾರಿಗಳು TDR ಮಾಫಿಯಾದೊಂದಿಗೆ ಷಾಮೀಲಾಗಿದ್ದರಿಂದ, ಮೇಲೆ ತಿಳಿಸಿರುವ ನಾಲ್ವರು - ರಾಜ್ಯ ಉಚ್ಚ ನ್ಯಾಯಾಲಯಕ್ಕೆ Writ ಅರ್ಜಿ ಸಲ್ಲಿಸಿ, “BMICAPA ಗೆ ತಾವು ಹಸ್ತಾಂತರಿಸಿರುವ ಸ್ವತ್ತನ್ನು ಬಿಬಿಎಂಪಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ನೀಡಲಾಗುತ್ತಿದ್ದು, ಅದಕ್ಕಾಗಿ ತಮ್ಮಗಳಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಳಸಬಹುದಾದ TDR ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕೆಂದು” ಮನವಿ ಮಾಡಿದ್ದರು ಎಂದರು.
ಸಿದ್ಧರಾಮಯ್ಯ ಜಾಣ ಮೌನ ವಹಿಸಿದ್ದರು: ಆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯನವರಿಗೆ ಈ ಮಹಾ ವಂಚನೆಯ ಮಾಹಿತಿಗಳು / ದಾಖಲೆಗಳು ನಗರಾಭಿವೃದ್ಧಿ ಇಲಾಖೆಯ ಮೂಲಕ ತಲುಪಿದ್ದರೂ ಸಹ ಅದನ್ನು ತಡೆಯುವ ಪ್ರಯತ್ನವನ್ನೇ ಮಾಡದೇ ಜಾಣ ಮೌನ ವಹಿಸಿದ್ದರು. ಇದಕ್ಕೂ ಮುಂಚೆ 12/03/2013 ರಂದು ಇದೇ ಪ್ರಸ್ತಾವನೆಯನ್ನು ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸೂಚನೆಯಂತೆ ಬಿಬಿಎಂಪಿ ಆಯುಕ್ತರಾಗಿದ್ದ ಸಿದ್ದಯ್ಯನವರು ರದ್ದು ಪಡಿಸಿದ್ದರು.
ಪ್ರಸ್ತುತ ಪಾಲಿಕೆಯ ಈಗಿನ ಮುಖ್ಯ ಆಯುಕ್ತರು ಸದರಿ ಹಗರಣದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿದ್ದರಿಂದಾಗಿ, ಅವರು “ಕೊಡಿಯಾಲ ಕರೇನಹಳ್ಳಿ”ಯ ಸ್ವತ್ತಿಗೆ ನೀಡಲಾಗಿರುವ DRC ಗಳನ್ನು BBMP ವ್ಯಾಪ್ತಿಯಲ್ಲಿ ಬಳಸಲು ಅವಕಾಶ ನೀಡಿರುವುದಿಲ್ಲ. ಇದರಿಂದ ಕಂಗೆಟ್ಟಿರುವ TDR ಮಾಫಿಯಾದ ನಾಲ್ವರು ಉಚ್ಛ ನ್ಯಾಯಾಲಯದಲ್ಲಿ “ನ್ಯಾಯಾಲಯ ನಿಂದನೆ” ಪ್ರಕರಣವನ್ನು ದಾಖಲಿಸುವುದರ ಮೂಲಕ ಪಾಲಿಕೆಯ ಮುಖ್ಯ ಆಯುಕ್ತರ ಮೇಲೆ ಒತ್ತಡ ಹೇರುವ ತಂತ್ರವನ್ನು ಅನುಸರಿಸಿದ್ದಾರೆ ಎಂದು ಆರೋಪಿಸಿದರು.
ಸಿಬಿಐಗೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹ: ಯಾವುದೇ ಕ್ಷಣದಲ್ಲಿಯಾದರೂ ಭ್ರಷ್ಟರು ಮೇಲುಗೈ ಸಾಧಿಸಬಹುದೆಂಬ ಕಾರಣದಿಂದ ಈ ಹಗರಣಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ “ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ”ಯನ್ನು ದಾಖಲಿಸುತ್ತಿದ್ದೇನೆ. ಅಲ್ಲದೇ, ಈ ಬೃಹತ್ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಈ ಬೃಹತ್ ಹಗರಣದಲ್ಲಿ ಭಾಗಿಯಾಗಿರುವ 2012-13 ರಿಂದ 2017-18 ರ ಅವಧಿಯಲ್ಲಿ BBMP ಯ DC (Land Acquisition & TDR) ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿರುವ K. ಲೀಲಾವತಿ - IAS, S. M. ಮಂಗಳ - KAS, ಮಲ್ಲಿಕಾರ್ಜುನ M. - KAS ಮತ್ತು S. N. ಬಾಲಚಂದ್ರ - KAS ಹಾಗೂ ಇದೇ ಅವಧಿಯಲ್ಲಿ ಪಾಲಿಕೆಯ “ಆಸ್ತಿಗಳ ವಿಭಾಗ”ದ ಜಂಟಿ ಆಯುಕ್ತರಾಗಿ ಕಾರ್ಯ ನಿರ್ವಹಿಸಿರುವ K. N. ದೇವರಾಜ್ - KAS ಮತ್ತು ಚಿಕ್ಕ ಮುನಿಯಪ್ಪ - KAS ಹಾಗೂ BMICAPA ಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ L. ಶಶಿಕುಮಾರ್, ವಂಚಕರಾದ ಪ್ರವೀಣ್ ಷಾ, ವಿಕ್ರಮ್ ಓಸ್ವಾಲ್, C. T. ತಿಮ್ಮಯ್ಯ ಮತ್ತು C. T. ಮರಿರಾಜು ರವರುಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಬೆಂಗಳೂರಲ್ಲಿ ಶೋಭಾ ಡೆವಲಪರ್ಸ್ ಮೇಲೆ ಐಟಿ ದಾಳಿ..