ಬೆಂಗಳೂರು : 2016ರಲ್ಲಿ ಮೈಸೂರು ಜಿಲ್ಲಾ ನ್ಯಾಯಾಲಯ ಆವರಣದ ಶೌಚಾಲಯದಲ್ಲಿ ಬಾಂಬ್ ಸ್ಫೋಟಿಸಿದ ಪ್ರಕರಣದಲ್ಲಿ ಅಪರಾಧಿಗಳಾಗಿ ತೀರ್ಮಾನಿಸಲ್ಪಟಿರುವ ತಮಿಳುನಾಡು ಮೂಲದ ಇಬ್ಬರು ಉಗ್ರರಿಗೆ ದಂಡ ಸಹಿತ 10 ವರ್ಷ ಜೈಲು ಶಿಕ್ಷೆ ಹಾಗೂ ಮತ್ತೊಬ್ಬ ಉಗ್ರನಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕಸನಪ್ಪ ನಾಯಕ್ ಅವರು ಅಪರಾಧಿಗಳಾದ ನೈನರ್ ಅಬ್ಬಾಸ್ ಅಲಿ ಮತ್ತು ಎಸ್. ದಾವೂದ್ ಸುಲೇಮಾನ್‌ಗೆ ಗರಿಷ್ಠ ತಲಾ ವರ್ಷ ಜೈಲು ಶಿಕ್ಷೆ ಹಾಗೂ ಅನುಕ್ರಮವಾಗಿ ತಲಾ 43 ಮತ್ತು 38 ಸಾವಿರ ದಂಡ ವಿಧಿಸಿದ್ದಾರೆ. ಮತ್ತೋರ್ವ ಅಪರಾಧಿ ಎಂ. ಸಂಸುಮ್ ಕರೀಂ ರಾಜಗೆ 5 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಭಾರತೀಯ ದಂಡ ಸಂಹಿತೆ, ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ, ಸ್ಫೋಟಕ ವಸ್ತು ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಈ ಮೂವರನ್ನು ಅಪರಾಧಿಗಳನ್ನು ಎಂದು ತೀರ್ಮಾನಿಸಿ ಎನ್‌ಎಎ ವಿಶೇಷ ನ್ಯಾಯಾಲಯವು 2021ರ ಅ. 8ರಂದು ಆದೇಶಿಸಿತ್ತು. ಶಿಕ್ಷೆ ಪ್ರಮಾಣವನ್ನು ಇಂದು ಪ್ರಕಟಿಸಲಾಗಿದೆ.
ಈ ಮಧ್ಯೆ ಅಪರಾಧಿ ಎಸ್.ದಾವೂದ್ ಸುಲೇಮಾನ್ ಅವರ ತಂದೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಮಗನನ್ನು ಕಾಣಲು ಪರಿತಪರಿಸುತ್ತಿದ್ದಾರೆ. ಆದ್ದರಿಂದ ತಂದೆಯನ್ನು ಕಾಣಲು ಸುಲೇಮಾನ್‌ಗೆ ಅವಕಾಶ ನೀಡಬೇಕು ಎಂದು ಕೋರಿ ಆತನ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಲು ನಿರಾಕರಿಸಿದ ನ್ಯಾಯಾಧೀಶರು, ಈಗಾಗಲೇ ಶಿಕ್ಷೆ ಪ್ರಮಾಣ ಘೋಷಿಸಿರುವುರಿಂದ ಸುಲೇಮಾನ್ ಅರ್ಜಿ ಮಾನ್ಯ ಮಾಡಲು ಈ ನ್ಯಾಯಾಲಯಕ್ಕೆ ಅಧಿಕಾರ ಇಲ್ಲ. ಆ ಮನವಿಯನ್ನು ಜೈಲಧಿಕಾರಿಗಳು ಪರಿಗಣಿಸಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಕರಣವೇನು?:
ಮೈಸೂರು ನಗರದ ಚಾಮರಾಜಪುರದಲ್ಲಿರುವ ಜಿಲ್ಲಾ ನ್ಯಾಯಾಲಯದ ಹಿಂಬದಿಯಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ 2016ರ ಆ.1ರಂದು ಬಾಂಬ್ ಸ್ಫೋಟವಾಗಿತ್ತು. ಅದೇ ದಿನ ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಅನಾಮಧೇಯ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ನಂತರ ಕೇಂದ್ರ ಗೃಹ ಸಚಿವಾಲಯದ ಆದೇಶಾನುಸಾರ ಎನ್‌ಐಎ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ತಮಿಳುನಾಡು ಮೂಲದ ನೈನರ್ ಅಬ್ಬಾಸ್ ಅಲಿ, ಎಂ.ಸಂಸುಮ್ ಕರೀಂ ರಾಜ ಮತ್ತು ಎಸ್. ದಾವೂದ್ ಸುಲೇಮಾನ್ ಅವರನ್ನು ಎನ್‌ಐಐ ತನಿಖಾಧಿಕಾರಿಗಳು 2017ರ ನ.27ರಂದು ಬಂಧಿಸಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿ 2018ರ ಮೇ 25ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಎನ್‌ಐಎ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು 2021ರ ಸೆ.29ರಂದು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.
ಇದನ್ನೂ ಓದಿ: ಕಲಬುರಗಿಯ ಹಲವೆಡೆ ಮತ್ತೆ ಕಂಪಿಸಿದ ಭೂಮಿ: ಮನೆಯಿಂದ ಹೊರಗೆ ಓಡಿಬಂದ ಜನ