ಬೆಂಗಳೂರು: ವಿಜಯನಗರದ ಹಂಪಿನಗರ ಮನೆಯಲ್ಲಿ ನಿಗೂಢ ಸ್ಫೋಟವಾಗಿದ್ದು, ಎರಡಂತಸ್ತಿನ ಕಟ್ಟಡದ ಮೊದಲನೇ ಮಹಡಿ ಮನೆಯಲ್ಲಿ ಘಟನೆ ನಡೆದಿದೆ. ಈ ವೇಳೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ.
ಘಟನೆಯಲ್ಲಿ ಸೂರ್ಯ ನಾರಾಯಣ ಶೆಟ್ಟಿ (74), ಪುಷ್ಪಾವತಮ್ಮ (70) ಎಂಬ ವೃದ್ಧ ದಂಪತಿ ಗಾಯಗೊಂಡಿದ್ದಾರೆ. ಮಧ್ಯರಾತ್ರಿ 12.45 ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಅಕ್ಕಪಕ್ಕದ ಮನೆಯವರು ಬೆಚ್ಚಿಬಿದ್ದಿದ್ದಾರೆ. ಈ ಸ್ಫೋಟದಿಂದ ಸುಮಾರು 5ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಒಂದು ಕಿ.ಮೀ.ವರೆಗೂ ಪಸರಿಸಿದ ಸ್ಫೋಟದ ಶಬ್ದ:
ನಿಗೂಢ ಸ್ಫೋಟದಿಂದ ನೆರೆಹೊರೆಯ ಮನೆಯ ಗಾಜುಗಳು ಪುಡಿಪುಡಿಯಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಚೆಲ್ಲಾಪಿಲ್ಲಿಯಾಗಿವೆ. ಅಲ್ಲದೇ, ಮನೆ ಮುಂದಿದ್ದ ಹೂಕುಂಡಗಳೆಲ್ಲವೂ ಛಿದ್ರಗೊಂಡಿವೆ. ಮನೆ ಮುಂದೆ ಹಾದು ಹೋಗಿದ್ದ ವಿದ್ಯುತ್ ತಂತಿ ಕೂಡ ತುಂಡಾಗಿದೆ. ಸುಮಾರು ಒಂದು ಕಿ.ಮೀ.ವರೆಗೂ ಸ್ಫೋಟದ ಶಬ್ದ ಕೇಳಿಸಿದ್ದು, ಸೊಂಪಾದ ನಿದ್ದೆಯಲ್ಲಿದ್ದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಸ್ಫೋಟದಲ್ಲಿ ಪುಷ್ಪಾವತಮ್ಮ ದೇಹಕ್ಕೆ ಶೇ. 70ರಷ್ಟು ಸುಟ್ಟ ಗಾಯವಾಗಿದ್ದು, ತಕ್ಷಣ ವಿಜಯನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಜಯನಗರ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸೂರ್ಯನಾರಾಯಣ ಶೆಟ್ಟಿ ಅವರಿಗೆ ವಿಜಯನಗರ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆದಿದೆ.
ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ವೇಳೆಗೆ, ಸ್ಥಳೀಯರೇ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಸ್ಫೋಟಕ್ಕೆ ಕಾರಣವೇನು?
ಸ್ಫೋಟದ ಬಳಿಕ ಪರಿಶೀಲಿಸಿದಾಗ ಮೊದಲು ಸಿಲಿಂಡರ್ ಸ್ಫೋಟ ಅಂತಲೇ ಹೇಳಲಾಗಿತ್ತು. ಆದರೆ ಮನೆಯಲ್ಲಿದ್ದ ಎರಡೂ ಸಿಲಿಂಡರ್ ಸೇಫ್ ಆಗೇ ಇವೆ. ಇತ್ತೀಚೆಗೆ ಸೂರ್ಯನಾರಾಯಣಶೆಟ್ಟಿ ಅವರ ಪುತ್ರ ದಿನೇಶ್ ಒಂದು ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದರು. ಅದರ ಬ್ಯಾಟರಿ ಏನಾದರು ಬ್ಲಾಸ್ಟ್ ಆಗಿದ್ಯಾ ಎಂದು ಪರಿಶೀಲನೆ ನಡೆಸಲಾಯಿತು. ಆದರೆ ಬ್ಯಾಟರಿಗೂ ಏನೂ ಆಗಿಲ್ಲ. ಬಳಿಕ ಗ್ಯಾಸ್ ಗೀಸರ್ ನೋಡಿದರೆ ಅದಕ್ಕೂ ಯಾವುದೇ ಹಾನಿ ಆಗಿಲ್ಲ. ಹಾಲ್, ಕಿಚನ್, ಬೆಡ್ ರೂಮ್ ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.
ಫ್ರಿಡ್ಜ್ ಪೀಸ್ ಪೀಸ್
ಆದರೆ ಇತ್ತೀಚೆಗಷ್ಟೇ ಖರೀದಿಸಿದ್ದ ಫ್ರಿಡ್ಜ್ ಪೀಸ್ ಪೀಸ್ ಆಗಿದೆ. ಇದರಿಂದಾಗಿ ಪೊಲೀಸರಿಗೆ ಸ್ಫೋಟ ಸಂಭವಿಸಿದ್ದು ಹೇಗೆ? ಎಂಬ ಗೊಂದಲ ಸೃಷ್ಟಿಯಾಗಿದೆ.