ಬೆಂಗಳೂರು: ರಾಜ್ಯ ಸೇರಿದಂತೆ ಇಡೀ ದೇಶದ ಜನರು ಕೊರೊನಾ ಸೋಂಕಿನ ಪ್ರಭಾವವನ್ನ ಎದುರಿಸಬೇಕಾಯ್ತು. ಕಣ್ಣಿಗೆ ಕಾಣದ ಈ ವೈರಸ್ ನಿತ್ಯ ಒಂದೊಂದು ರೀತಿಯಲ್ಲಿ ಬದಲಾವಣೆಯಾಗುತ್ತಿದೆ. ಹೀಗಾಗಿ, ಯಾವ ರೂಪಾಂತರಿ ವೈರಸ್ ಹೇಗೆ ಪರಿಣಾಮ ಬೀರಬಲ್ಲದು ಎಂಬುದೇ ತಜ್ಞರಿಗೆ ನಿದ್ದೆಗೆಡಿಸಿದೆ.
ರಾಜ್ಯದಲ್ಲಿ ಮೊದಲ ಹಾಗೂ ಎರಡನೇ ಅಲೆಯ ಭೀಕರತೆ ಕಂಡಿರುವ ನಾವು ಇದೀಗ ಮೂರನೇ ಅಲೆಗೂ ಸಿದ್ಧವಾಗಬೇಕಿದೆ. ಈಗಾಗಲೇ ಮೂರನೇ ಅಲೆಯ ಎಚ್ಚರಿಕೆ ನೀಡಿರುವ ತಜ್ಞರು, ವೈದ್ಯಕೀಯ ಸೇವೆಗಳು ಸಜ್ಜಾಗಿರುವಂತೆ ಸೂಚಿಸಿದ್ದಾರೆ.
ಸದ್ಯ, ರಾಜ್ಯದಲ್ಲಿ ಕಳೆದೆರಡು ವಾರಗಳಿಂದ ಹೊಸ ಸೋಂಕಿತರ ಸಂಖ್ಯೆ ಇಳಿಕೆಯಾಗ್ತಿದೆ. ಪ್ರತಿದಿನ 40-50 ಸಾವಿರದಲ್ಲಿ ಬರ್ತಿದ್ದ ಪ್ರಕರಣಗಳು ಇದೀಗ ಒಂದು ಸಾವಿರಕ್ಕೆ ಇಳಿಕೆ ಕಂಡಿದೆ. ಕೊರೊನಾ ಇಳಿಕೆ ಬೆನ್ನಲ್ಲೇ ಸರ್ಕಾರವೂ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ಜನರು ಎಂದಿನಂತೆ ತಮ್ಮ ಕೆಲಸ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ ಆಗಿದೆಯೇ ವಿನಃ ಕೋವಿಡ್ ಸೋಂಕು ಸಂಪೂರ್ಣ ಹೋಗಿಲ್ಲ. ಹೀಗಿರುವಾಗ, ಜನರ ಈ ಬೇಕಾಬಿಟ್ಟಿ ಓಡಾಟ ಹಾಗೂ ಹೊಸ ರೂಪಾಂತರಿ ವೈರಸ್ಗಳೇ ಮೂರನೇ ಅಲೆಗೆ ದಾರಿ ಮಾಡಿಕೊಡಲಿದೆಯಾ ಎಂಬ ಆತಂಕ ಶುರುವಾಗಿದೆ.
ಯಾಕೆಂದರೆ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ರೂಪಾಂತರಿ ವೈರಸ್ ಪತ್ತೆಯಾಗಿದೆ. ರೂಪಾಂತರಿ ವೈರಸ್ ಕುರಿತು ಕೇಂದ್ರ ಸರ್ಕಾರವೇ ಅಧಿಕೃತ ಮಾಹಿತಿ ನೀಡಿದೆ. ಒಟ್ಟು ದೇಶದ 174 ಜಿಲ್ಲೆಗಳಲ್ಲಿ ಕೊರೊನಾ ರೂಪಾಂತರಿ ಇದ್ದು, ಕರ್ನಾಟದ ಬೆಂಗಳೂರು, ಮೈಸೂರಿನಲ್ಲಿ ಪತ್ತೆಯಾಗಿದೆ. ಹಾಗೇ 28 ರಾಜ್ಯಗಳಲ್ಲಿ ಹಾಗೂ 7 ಕೇಂದ್ರಾಡಳಿತ ಪ್ರದೇಶದಲ್ಲಿ ಕೊರೊನಾ ರೂಪಾಂತರ ಆಗಿದೆ.
ಸದ್ಯಕ್ಕೆ ತಜ್ಞರು ನಿಖರವಾಗಿ ಹೇಳಲು ಸಾಧ್ಯವಾಗಿರುವುದು ಕೆಲವೇ ರೂಪಾಂತರಿಗಳು ಮಾತ್ರ. ಅದರಲ್ಲಿ ಯುಕೆ ರೂಪಾಂತರಿ ಆಲ್ಫಾ ವೈರಸ್, ಸೌತ್ ಆಫ್ರಿಕಾದ ಬೀಟಾ, ಬ್ರೆಜಿಲ್ನ ಗಾಮಾ ವೈರಸ್, ಭಾರತದಲ್ಲಿ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿದೆ. ಭಾರತದಲ್ಲೇ ರೂಪಾಂತರಿಯಾಗಿರುವ ಕಪ್ಪಾ ವೈರಸ್ ಅನ್ನು ಕೂಡ ಗುರುತಿಸಲಾಗಿದೆ.
ಇದಲ್ಲದೇ ಹಲವು ರೂಪಾಂತರಿಗಳು ಪತ್ತೆಯಾಗಿದ್ದು, ಆದರಲ್ಲಿ ಯಾವ ರೂಪಾಂತರಿ ಪರಿಣಾಮಕಾರಿಯಾಗಿ ತೊಂದರೆ ಉಂಟು ಮಾಡುತ್ತೆ ಅನ್ನೋದನ್ನ ತಿಳಿಯುವುದು ಕಷ್ಟ. ಹೀಗಾಗಿ ಹೊಸ ವೈರಸ್ಗಳ ಪತ್ತೆ ಮತ್ತು ಪರಿಣಾಮದ ಕುರಿತಾದ ಅಧ್ಯಯನಗಳು ನಡೆಯುತ್ತಲೇ ಇವೆ. ಡೆಲ್ಟಾ ರೂಪಾಂತರಿ ಬದಲಿಗೆ ಹೊಸ ರೂಪಾಂತರಿ ಬಂದರೆ ಮೂರನೇ ಅಲೆ ಹೆಚ್ಚು ಹಾನಿ ಮಾಡಬಹುದು. ಯಾವುದೇ ರೂಪಾಂತರಿ ಬಂದರೂ, ಕೋವಿಡ್ ಮಾರ್ಗಸೂಚಿಯನ್ನ ಸರಿಯಾಗಿ ಪಾಲಿಸಿ ಬಚಾವ್ ಆಗುವುದು ಮಾತ್ರ ಜನರ ಕೈಯಲ್ಲಿದೆ.