ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಚುನಾವಣೆ ಫಲಿತಾಂಶ ಹಿನ್ನೆಲೆ ನಿನ್ನೆ ಪಟಾಕಿ ಸಿಡಿಸಿ ಹಲೆಡೆ ಸಂಭ್ರಮಾಚರಣೆ ನಡೆಸಲಾಗಿದೆ. ಮನೆ ಮುಂದೆ ಪಟಾಕಿ ಹೊಡೆದ ವಿಚಾರಕ್ಕೆ ದಾಯಾದಿ ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಕೊಡಲಿಯಿಂದ ದೊಡ್ಡಪ್ಪನನ್ನೇ ಕೊಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಹೊಸಕೋಟೆ ತಾಲೂಕಿನ ಡಿ. ಶೆಟ್ಟಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಕೃಷ್ಣಪ್ಪ (56) ಕೊಲೆಯಾದ ವ್ಯಕ್ತಿ. ಮೃತರ ಪತ್ನಿ ಗಂಗಮ್ಮ, ಪುತ್ರ ಬಾಬು ಮೇಲೆ ಸಹ ಹಲ್ಲೆಯಾಗಿದೆ ಎನ್ನುವ ಆರೋಪವಿದೆ. ತಾಯಿ ಮಗ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ರನ ಪರಿಸ್ಥಿತಿ ಚಿಂತಾಜನಕವಾಗಿದೆ.
ಕೊಲೆಯಾದ ಕೃಷ್ಣಪ್ಪ ಮತ್ತು ಗಣೇಶಪ್ಪ ಸಹೋದರರು. ಗಣೇಶಪ್ಪ ಶಾಸಕ ಶರತ್ ಬಚ್ಚೇಗೌಡರ ಬೆಂಬಲಿಗರು ಎಂದು ಹೇಳಲಾಗಿದೆ. ನಿನ್ನೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಶರತ್ ಬಚ್ಚೇಗೌಡ ಅವರು ಜಯ ಗಳಿಸಿದರು. ಈ ಗೆಲುವಿನ ಹಿನ್ನೆಲೆ ಗಣೇಶಪ್ಪ ಅವರ ಮಕ್ಕಳು ಸೇರಿದಂತೆ ಕೆಲವರು ಕೃಷ್ಣಪ್ಪ ಅವ ಮನೆ ಮುಂದೆ ಪಟಾಕಿ ಹೊಡೆದಿದ್ದಾರೆ. ಇದೇ ವಿಚಾರಕ್ಕೆ ದಾಯಾದಿ ಕುಟುಂಬಗಳ ನಡುವೆ ಗಲಾಟೆ ನಡೆದಿದೆ.
ಗಣೇಶಪ್ಪ ಅವರ ಮಗ ಆದಿತ್ಯ ಕೊಡಲಿಯಿಂದ ದೊಡ್ಡಪ್ಪ ಕೃಷ್ಣಪ್ಪ ಮತ್ತು ಆತನ ಪತಿ ಗಂಗಮ್ಮ, ಮಗ ಬಾಬು ಮೇಲೆ ಹಲ್ಲೆ ಮಾಡಿದ್ದಾರೆ. ಕೊಡಲಿ ಏಟಿಗೆ ಕೃಷ್ಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದಾರೆ. ಹಲ್ಲೆಗೊಳಗಾದ ಬಾಬು ಮತ್ತು ಗಂಗಮ್ಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಗೆಲ್ಲಲಿಕ್ಕೆ ಬಂದವರು, ನಮಗೆ ಸೋಲು ಕ್ಷಣಿಕ: ಬಿ.ಎಲ್.ಸಂತೋಷ್
ಆಸ್ಪತ್ರೆಗೆ ಮಾಜಿ ಸಚಿವ ಎಂಟಿಬಿ ನಾಗರಾಜು ಭೇಟಿ ನೀಡಿ ಹಲ್ಲೆಗೊಳಗಾದವರ ಆರೋಗ್ಯ ವಿಚಾರಿಸಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟವಾದ 4 ಗಂಟೆಯಲ್ಲಿ ಇಂತಹ ಘಟನೆ ನಡೆದಿದೆ. ಮನೆ ಮುಂದೆ ಪಟಾಕಿ ಹೊಡೆದ ಬಗ್ಗೆ ಕೇಳಲು ಬಂದವರ ಮೇಲೆ ಹಲ್ಲೆ ನಡೆಸೋದು ಹಾಲಿ ಶಾಸಕ ಶರತ್ ಬಚ್ಚೇಗೌಡರ ವರ್ತನೆಯಾಗಿದೆ. ಇದೇ ರೀತಿಯ ಘಟನೆಗಳು ತಾಲೂಕಿನ ಹಲವೆಡೆ ನಡೆದಿದ್ದು, ಅಪ್ಪ ಮಗ ತಮ್ಮ ಹಿಂದಿನ ವರ್ತನೆಗಳನ್ನ ತೋರಿಸಲು ಪ್ರಾರಂಭಿಸಿದ್ದಾರೆ ಎಂದು ಎಂಟಿಬಿ ನಾಗರಾಜ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಡಿಕೆಶಿ ಕುಟುಂಬ ಭೇಟಿ; ವಿಶೇಷ ಪೂಜೆ ಸಲ್ಲಿಕೆ
ರಾಜ್ಯ ವಿಧಾನಸಭಾ ಚುನಾವಣೆ ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಎಲ್ಲಾ ಪಕ್ಷಗಳು, ಅಭ್ಯರ್ಥಿಗಳು ಗೆಲ್ಲಲೇಬೇಕೆಂಬ ಉದ್ದೇಶದಿಂದ ಭರ್ಜರಿ ಪ್ರಚಾರ ನಡೆಸಿದ್ದರು. ಇದೇ ಮೇ. 10ರಂದು ಚುನಾವಣೆ ನಡೆದು, ನಿನ್ನೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 66 ಸ್ಥಾನ, ಜೆಡಿಎಸ್ 19 ಸ್ಥಾನ, ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಯಲ್ಲಿ ಕಾಂಗ್ರೆಸ್ನ ಶರತ್ ಬಚ್ಚೇಗೌಡ ಗೆದ್ದು ಬೀಗಿದ್ದಾರೆ. ಫಲಿತಾಂಶ ಪ್ರಕಟವಾದ ದಿನವೇ ಇಂತಹ ಘಟನೆ ನಡೆದಿದೆ.