ಬೆಂಗಳೂರು: ಕಳೆದ ಏಳು ವರ್ಷಗಳ ಹಿಂದೆ ನಗರದಲ್ಲಿ ಫಿಲ್ಮಿ ಮಾದರಿಯಲ್ಲಿ ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಆಂಧ್ರಪ್ರದೇಶದಲ್ಲಿ ಶವ ಬಿಸಾಕಿ ತಲೆಮರೆಸಿಕೊಂಡಿದ್ದ ದಂಪತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಸೆರೆಹಿಡಿದ್ದಾರೆ.
ಏಳು ವರ್ಷಗಳ ಹಿಂದೆ ವಜೀರ್ ಪಾಷಾ ಎಂಬಾತನನ್ನು ಕೊಲೆ ಮಾಡಿದ ಆರೋಪದಡಿ ದಂಪತಿಗಳಾದ ಮೊಹಮ್ಮದ್ ಗೌಸ್ ಹಾಗೂ ಹೀನಾ ಕೌಸರ್ ನನ್ನು ಪೊಲೀಸರು ಬಂಧಿಸಿದ್ದಾರೆ. 2012ರಲ್ಲಿ ದಂಪತಿ ಮದುವೆಯಾಗಿದ್ದು ಆಂಧ್ರಪ್ರದೇಶದಿಂದ ಬಂದು ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದರು. ಜೀವನಕ್ಕಾಗಿ ಗೌಸ್ ಟೈಲರಿಂಗ್ ಕೆಲಸ ಮಾಡುತ್ತಿದ್ದ.
ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಪರಿಚಯಸ್ಥರಿಂದ ಸಾಲ ಪಡೆದುಕೊಂಡಿದ್ದ. ಆದರೆ, ಸಾಲ ತೀರಿಸಲಾಗದೇ ಹೈದರಾಬಾದ್ಗೆ ದಂಪತಿ ಓಡಿ ಹೋಗಿದ್ದರು. ಈ ವೇಳೆ ಹೀನಾ ಕೌಸರ್ ಸಂಬಂಧಿಕರಾಗಿದ್ದ ಮೃತ ವಜೀರ್ ಪಾಷಾ ಸಾಲ ತೀರಿಸಲು ಹಣಕಾಸಿನ ಸಹಾಯ ಮಾಡಿದ್ದ.
ಇದಕ್ಕೆ ಪ್ರತಿಯಾಗಿ ಕೌಸರ್ ನೊಂದಿಗೆ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ. ಇಬ್ಬರ ಸಂಬಂಧದ ವಿಷ್ಯ ತಿಳಿದ ಗಂಡ ಗೌಸ್, ಹೆಂಡತಿಗೆ ಬುದ್ದಿ ಹೇಳಿದ್ದ. ಇದಾದ ಬಳಿಕ ವಜೀರ್ ನೊಂದಿಗೆ ಕೌಸರ್ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಅಸಮಾಧಾನಗೊಂಡು ಕೊಟ್ಟಿರುವ ಹಣ ವಾಪಸ್ ನೀಡುವಂತೆ ವಜೀರ್ ಒತ್ತಾಯಿಸುತ್ತಿದ್ದನಂತೆ.
ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಮೂಟೆ ಕಟ್ಟಿದ್ದ ದಂಪತಿ: ವಜೀರ್ ಕಿರುಕುಳ ಬಗ್ಗೆ ಪತಿಗೆ ವಿಷ್ಯ ತಿಳಿಸಿದ್ದರು. ವಜೀರ್ ಹತ್ಯೆ ಮಾಡಲು ಗಂಡನ ಪ್ಲ್ಯಾನ್ಗೆ ಹೆಂಡತಿ ಯೆಸ್ ಅಂದಿದ್ದಳು. ಪಕ್ಕಾ ಪ್ಲ್ಯಾನ್ ಮಾಡಿಕೊಂಡ ಗೌಸ್, ಹೆಂಡತಿ ಮೂಲಕ ವಜೀರ್ನನ್ನ ಕರೆ ಮಾಡಿ ಮನೆಗೆ ಕರೆಯಿಸಿಕೊಂಡು ಮಂಚದ ಕೆಳಗೆ ಅವಿತುಕೊಂಡಿದ್ದ. ಕೌಸರ್ ಏಕಾಂಗಿಯಾಗಿರುವುದನ್ನು ಅರಿತ ವಜೀರ್ ಆಕೆಯೊಂದಿಗೆ ಸರಸ - ಸಲ್ಲಾಪದಲ್ಲಿ ತೊಡಗಿದ್ದ. ಬೆತ್ತಲೆಯಾಗಿದ್ದ ವಜೀರ್ನ ಕೊರಳಿಗೆ ಸೀರೆ ಸುತ್ತಿ ಉಸಿರುಗಟ್ಟಿಸಿ ದಂಪತಿ ಕೊಲೆ ಮಾಡಿದ್ದರು.
ಬಳಿಕ ಶವವನ್ನ ಪ್ಲಾಸ್ಟಿಕ್ ಚೀಲದಿಂದ ಸುತ್ತಿ ದಾರದಿಂದ ಕಟ್ಟಿದ್ದರು. ಅದೇ ದಿನ ಸಂಜೆ ವಜೀರ್ ತಂದಿದ್ದ ಗಾಡಿಯಲ್ಲಿಯೇ ಶವವಿರಿಸಿಕೊಂಡು ಯಲಹಂಕ - ಜಾಲಹಳ್ಳಿ ಮಾರ್ಗವಾಗಿ ಆಂಧ್ರಪ್ರದೇಶದ ಹಿಂದೂಪುರ ರಸ್ತೆಯಲ್ಲಿರುವ ಕಾವೇಟಿನಾಗೇಪಲ್ಲಿಯ ಮೋರಿ ಬಳಿ ಎಸೆದು ಅನಂತಪುರದ ಬಾಡಿಗೆ ಮನೆಯೊಂದರಲ್ಲಿ ತಲೆಮರೆಸಿಕೊಂಡಿದ್ದರು. ಕೆಲ ದಿನಗಳ ಬಳಿಕ ಅನಂತಪುರದ ಸೋಮೆಂದೆಪಲ್ಲಿ ಪೊಲೀಸರು ಶವ ಪತ್ತೆಯಾಗಿದ್ದು, ಯುಡಿಆರ್ ಪ್ರಕರಣ ದಾಖಲಿಸಿಕೊಂಡು ಪತ್ತೆಯಾಗದ ಪ್ರಕರಣವೆಂದು ಕೋರ್ಟ್ಗೆ ವರದಿ ಸಲ್ಲಿಸಿದ್ದರು.
ಏಳು ವರ್ಷಗಳ ಬಳಿಕ ರಾಜಧಾನಿಗೆ ಆಗಮಿಸಿದ್ದ ದಂಪತಿ ಲಾಕ್ : ಕೃತ್ಯವೆಸಗಿ ಏಳು ವರ್ಷಗಳ ಕಾಲ ಆಂಧ್ರದಲ್ಲೇ ದಂಪತಿ ವಾಸವಾಗಿದ್ದರು. ಇತ್ತೀಚೆಗೆ ಹೀನಾ ಕೌಸರ್ ತಾತ ಮೃತಪಟ್ಟ ಹಿನ್ನೆಲೆ ಅಂತಿಮ ದರ್ಶನಕ್ಕಾಗಿ ನಗರಕ್ಕೆ ಆಗಮಿಸಿದ್ದಾಗ ಮೃತ ವಜೀರ್ ಪತ್ನಿ ಆಯೇಷಾ ದಂಪತಿ ವಿರುದ್ಧ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪ್ರಶಾಂತ್ ನೇತೃತ್ವದ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಇದನ್ನು ಓದಿ:ಮರ್ಯಾದಾ ಹತ್ಯೆ ಪ್ರಕರಣ: ಪ್ರಿಯಕರನ ಜತೆ ಸೇರಿ ಮಗಳನ್ನೇ ಕೊಂದ ಮಾಯಾಂಗಿನಿ