ಬೆಂಗಳೂರು : ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರ ನಡೆದ ಮೊದಲ ಚುನಾವಣೆಯಲ್ಲೇ ಉತ್ತಮ ಫಲಿತಾಂಶದ ಮೂಲಕ ನಾಯಕತ್ವ ಸಾಬೀತುಪಡಿಸುವ ದೃಷ್ಟಿಯಿಂದ ಉತ್ತಮ ಆರಂಭ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೆ ಬಂದ ಒಂದೂವರೆ ತಿಂಗಳಿನಲ್ಲೇ ಎದುರಾದ ಮೂರು ಪ್ರಮುಖ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುತ್ತಿದೆ. ಬೆಳಗಾವಿಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಸ್ವತಂತ್ರವಾಗಿ ಅಧಿಕಾರಕ್ಕೇರುತ್ತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಅತಿ ದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಬರುವ ಸನಿಹದಲ್ಲಿದೆ.
ಕಲಬುರಗಿಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಚಿಂತನೆ ನಡೆದಿದೆ. ಮೂರೂ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಬಹುತೇಕ ಪಕ್ಕಾ ಆಗಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ ಎನ್ನುವ ಪ್ರತಿಪಕ್ಷ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಲು ಮತದಾರರು ಈ ಫಲಿತಾಂಶದ ಮೂಲಕ ಹೊಸ ಅಸ್ತ್ರ ನೀಡಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾದರೂ ಬಿಜೆಪಿ ಸರ್ಕಾರದ ಮೇಲೆ ಜನರಿಗೆ ವಿಶ್ವಾಸವಿದೆ ಎನ್ನುವುದು ಪಾಲಿಕೆ ಫಲಿತಾಂಶದಿಂದ ಮತ್ತೊಮ್ಮೆ ಸಾಬೀತಾಗಿದೆ. ಕಳೆದೆರಡು ವರ್ಷದಿಂದ ಕೊರೊನಾ, ನೆರೆ ಹಾವಳಿಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದರೂ ಜನತೆ ಸರ್ಕಾರದ ಪರ ಒಲವು ವ್ಯಕ್ತಪಡಿಸಿದ್ದಾರೆ ಎನ್ನುವುದಕ್ಕೆ ಈ ಫಲಿತಾಂಶ ನಿದರ್ಶನ.
ಬೊಮ್ಮಾಯಿ ನಾಯಕತ್ವಕ್ಕೆ ಜೈ: ಬಸವರಾಜ ಬೊಮ್ಮಾಯಿ ನಾಯಕತ್ವಕ್ಕೂ ಮತದಾರರು ಜೈ ಎಂದಿದ್ದಾರೆ. ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ದಾವಣಗೆರೆಯಲ್ಲಿ ಘೋಷಣೆ ಮಾಡಿದ ನಂತರವೂ ಬಿಜೆಪಿ ಪರ ಜನರ ಒಲವು ಕಡಿಮೆಯಾಗಿಲ್ಲ ಎನ್ನುವುದು ಸ್ಪಷ್ಟ.
ಕುಗ್ಗದ ಪಕ್ಷದ ವರ್ಚಸ್ಸು : ಅಗತ್ಯ ವಸ್ತು ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಹಿನ್ನೆಲೆ ಕೇಂದ್ರದ ವಿರುದ್ಧ ಜನಾಕ್ರೋಶವಿದೆ ಎನ್ನಲಾಗುತ್ತಿತ್ತು. ಪ್ರತಿಪಕ್ಷಗಳೂ ಇದೆ ಹೇಳಿಕೆ ನೀಡುತ್ತಿವೆ. ಇದರ ನಡುವೆಯೂ ಜನರು ಬಿಜೆಪಿಗೆ ಜೈ ಎಂದಿರುವುದು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಜನ ಬಿಜೆಪಿ ಪರ ಒಲವು ಹೊಂದಿದ್ದಾರೆ ಎನ್ನುವುನ್ನು ತೋರಿಸುತ್ತಿದೆ.
ಕೇಂದ್ರ ಸರ್ಕಾರದ ವರ್ಚಸ್ಸು ಕುಗ್ಗಿಲ್ಲ ಎನ್ನುವುದಕ್ಕೆ ಈ ಫಲಿತಾಂಶ ಉದಾಹರಣೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರ ಎದುರಾದ ಮೊದಲ ಚುನಾವಣೆಯಲ್ಲಿ ಉತ್ತಮ ಆರಂಭ ಕಂಡುಕೊಂಡಿದ್ದು, ಯಡಿಯೂರಪ್ಪ ನಾಯಕತ್ವ ಬದಲಾವಣೆ ನಂತರವೂ ಬಿಜೆಪಿ ಅಲೆ ರಾಜ್ಯದಲ್ಲಿ ಇದೆ ಎನ್ನುವುದು ಸಾಬೀತಾದಂತಾಗಿದೆ.
ಎಂಇಎಸ್ ಸೃಷ್ಟಿತ ಗೊಂದಲಕ್ಕೆ ಬ್ರೇಕ್ : ಬೆಳಗಾವಿಯಲ್ಲಿ ಪಾಲಿಕೆಯಲ್ಲಿ ಸದಾ ಒಂದಲ್ಲಾ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಕನ್ನಡದ ವಿಚಾರದಲ್ಲೂ ಗೊಂದಲಕಾರಿ ನಿರ್ಧಾರಗಳನ್ನು ತೆಗೆದುಕೊಂಡು ವಿವಾದ ಸೃಷ್ಟಿಸಿ ಸರ್ಕಾರಕ್ಕೆ ಕಿರಿಕಿರಿ ಮಾಡಲಾಗುತ್ತಿದ್ದ ನಿದರ್ಶನಗಳಿವೆ. ಎಂಇಎಸ್ ಬೆಂಬಲಿತ ಸದಸ್ಯರ ಬೆಂಬಲ ಪಡೆದು ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದು, ಇದಕ್ಕೆ ಕಾರಣವಾಗಿತ್ತು. ಆದರೆ, ಈಗ ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿದ್ದು, ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ ಬೆಂಬಲಿತರಿಂದ ಆಗುತ್ತಿದ್ದ ಗೊಂದಲಗಳಿಗೆ ಬ್ರೇಕ್ ಬೀಳಲಿದೆ.
ಓದಿ: ರಾಜ್ಯದಲ್ಲೇ ಅತ್ಯಧಿಕ ಕೊರೊನಾ ಪಾಸಿಟಿವ್ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲು