ಬೆಂಗಳೂರು: ನನ್ನ ಸೋಲಿಗೆ ಕಾರಣರಾಗಿರುವ ಶರತ್ ಬಚ್ಚೇಗೌಡರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಹೊಸಕೋಟೆ ಪರಾಜಿತ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಎಂಟಿಬಿ ನಾಗರಾಜ್ ಭೇಟಿ ನೀಡಿ, ಕ್ಷೇತ್ರದ ಕೆಲಸಗಳ ಜೊತೆ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ನನ್ನ ಸೋಲಿಗೆ ಶರತ್ ಬಚ್ಚೇಗೌಡ, ಸಂಸದ ಬಚ್ಚೇಗೌಡ ಕಾರಣ. ಮೊದಲು ಒಪ್ಪಿ ಆಮೇಲೆ ಶರತ್ ನನಗೆ ಮೋಸ ಮಾಡಿದರು. ನನ್ನ ಸೋಲಿಗೆ ಅವರಿಬ್ಬರೇ ನೇರ ಕಾರಣ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಬಾರದು. ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.
ಮಂತ್ರಿಯಾಗುವ ಆಸೆ ಇದೆ: ನನಗೂ ಮಂತ್ರಿ ಆಗಬೇಕು ಅಂತಾ ಆಸೆಯಿದೆ. ನಮ್ಮ ಪರಿಸ್ಥಿತಿಯ ಬಗ್ಗೆ ಸಿಎಂಗೆ ಗೊತ್ತಿದೆ ಎಂದರು. ಸಚಿವ ಸ್ಥಾನದ ಬಗ್ಗೆ ಸಿಎಂ ಯಡಿಯೂರಪ್ಪ ನನಗೆ ಯಾವುದೇ ಭರವಸೆ ನೀಡಿಲ್ಲ. ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾವು ಬದ್ಧವಾಗಿದ್ದೇವೆ ಎಂದರು.
ದೆಹಲಿ ನಾಯಕರ ಭೇಟಿ ಮಾಡಲ್ಲ : ಹೈಕಮಾಂಡ್ ಸೇರಿದಂತೆ ಕೇಂದ್ರದ ಯಾವುದೇ ನಾಯಕರನ್ನು ನಾನು ಭೇಟಿ ಮಾಡಲ್ಲ. ರಾಜ್ಯ ನಾಯಕರೇ ಎಲ್ಲಾ ನಿರ್ಧಾರ ಮಾಡಲಿ ಎಂದರು. ನಾವು ಕೇಳೋದನ್ನು ಕೇಳಿದ್ದೇವೆ. ಮುಂದೆ ಅವರು ನಿರ್ಧಾರ ಮಾಡಲಿ ಎಂದು ಹೈಕಮಾಂಡ್ ಭೇಟಿ ಸಾಧ್ಯತೆಯನ್ನು ಎಂಟಿಬಿ ತಳ್ಳಿ ಹಾಕಿದರು.