ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ, ಪುತ್ರನಿಗೆ ಹೊಸಕೋಟೆ ಟಿಕೆಟ್ ಕೇಳಿದ್ದೇನೆ. ಅದರಂತೆ ಕುರುಬ ಸಮುದಾಯ ಹೆಚ್ಚಿರುವ ಕಡೆ ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆಯೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವುದಾಗಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.
ಬಿಎಸ್ವೈ ಅಧಿಕೃತ ನಿವಾಸ ಕಾವೇರಿಗೆ ಸಚಿವ ಎಂಟಿಬಿ ನಾಗರಾಜ್ ಭೇಟಿ ನೀಡಿದ್ದಾರೆ. ಟಿಕೆಟ್ ಕುರಿತು ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ. ಈ ಬಾರಿ ತಾವು ಸ್ಪರ್ಧೆ ಮಾಡುವುದಿಲ್ಲ, ಪುತ್ರನಿಗೆ ಟಿಕೆಟ್ ಕೊಡಿಸುವಂತೆ ಮನವಿ ಮಾಡಿದ್ದು, ಪುತ್ರನ ಗೆಲ್ಲಿಸಿಕೊಂಡು ಬರುವ ಆಶ್ವಾಸನೆ ನೀಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಬಿಎಸ್ವೈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, "ನನ್ನ ಮಗನಿಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದ್ದೇನೆ. ಕೋರ್ ಕಮಿಟಿ ಸಭೆಯಲ್ಲೂ ಈ ಬಗ್ಗೆ ಚರ್ಚಿಸಿದ್ದೇನೆ. ಈಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿಯೂ ಮನವಿ ಮಾಡಿದ್ದೇನೆ. ಸಿಎಂ ಬೊಮ್ಮಾಯಿ ಅವರಲ್ಲೂ ಮಾತನಾಡಿದ್ದೇನೆ. ಹೊಸಕೋಟೆಯಿಂದ ನನ್ನ ಮಗನಿಗೆ ಟಿಕೆಟ್ ಕೊಡುತ್ತಾರೆ. ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಅಲ್ಲದೇ ಕುರುಬ ಸಮುದಾಯಕ್ಕೆ 8 ಟಿಕೆಟ್ ನೀಡಬೇಕು ಎಂದು ಕೇಳಿದ್ದೇನೆ. ಈ ಬಗ್ಗೆ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೇನೆ" ಎಂದರು.
ಇದನ್ನೂ ಓದಿ: ಗುರುಮಠಕಲ್ ಕ್ಷೇತ್ರಕ್ಕೆ ಬಾಬುರಾವ್ ಚಿಂಚನಸೂರ್ಗೆ ಕಾಂಗ್ರೆಸ್ ಟಿಕೆಟ್: ಬಿಜೆಪಿ ಪ್ರತಿಕ್ರಿಯೆ ಏನು?
ಈ ಹಿಂದೆ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರಲ್ಲಿ ಎಂಟಿಬಿ ನಾಗರಾಜ್ ಕೂಡ ಒಬ್ಬರು. ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರೂ ಸಚಿವ ಸ್ಥಾನ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಸ್ಪರ್ಧೆ ಕಾರಣದಿಂದ ಸೋತರೂ ಪರಿಷತ್ ಸದಸ್ಯರನ್ನಾಗಿ ಮಾಡಿ ಅವರಿಗೆ ಯಡಿಯೂರಪ್ಪ ಸಚಿವ ಸ್ಥಾನ ನೀಡಿದ್ದರು. ಹಿಂದಿನ ಬಿಜೆಪಿ ಅಭ್ಯರ್ಥಿ ಬಂಡಾಯವಾಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ನಂತರ ಕಾಂಗ್ರೆಸ್ ಸೇರಿದ್ದು, ಈಗ ಆ ಕ್ಷೇತ್ರ ಖಾಲಿ ಇದ್ದು ಎಂಟಿಬಿ ಪುತ್ರನಿಗೆ ಖಚಿತವಾಗಿದೆ ಎನ್ನಲಾಗುತ್ತಿದೆ.
ಪುತ್ರನಿಗೆ ಟಿಕೆಟ್ ಕೋರಿದ ರೋಷನ್ ಬೇಗ್: ಇನ್ನು ರೋಷನ್ ಬೇಗ್ ಅವರು ಕಾವೇರಿ ನಿವಾಸದಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದರು. ಮಾಜಿ ಸಚಿವರೂ ಆಗಿರುವ ರೋಷನ್ ಬೇಗ್ ಸದ್ಯ ಕಾಂಗ್ರೆಸ್ ತೊರೆದು ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ. ಹಾಗಾಗಿ ಬಿಜೆಪಿಯತ್ತ ಮುಖ ಮಾಡಿದ್ದು, ಪುತ್ರ ರುಮನ್ ಬೇಗ್ಗೆ ಶಿವಾಜಿ ನಗರದಿಂದ ಟಿಕೆಟ್ ಕೊಡಿಸುವಂತೆ ಬಿಎಸ್ವೈ ಬಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಅಳೆದು ತೂಗಿ ಬೆಂಗಳೂರು ಅಭ್ಯರ್ಥಿಗಳ ಆಯ್ಕೆ, ಮಹಾನಗರ ಹಿಡಿತ ಕೈಗೆ ಬಹುಮುಖ್ಯ