ಕೆಆರ್ ಪುರಂ : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಗರಿಗೆದರಿದೆ. ಅದರಂತೆ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಅವರ ಬೆಂಬಲಿಗರು ನಾಯಕನ ಪದಗ್ರಹಣ ವೀಕ್ಷಿಸಲು ಕಾತುರದಿಂದ ಎದುರು ನೋಡುತ್ತಿದ್ದಾರೆ.
ಮಾಧ್ಯಮಗಳಲ್ಲಿ ಎಂಟಿಬಿ ನಾಗರಾಜ್ಗೆ ಸಚಿವ ಸ್ಥಾನ ಖಚಿತ ಎಂದು ಪ್ರಾಸಾರವಾಗುತ್ತಿರುವುದನ್ನು ನೋಡಿ ಮನೆಯ ಮುಂದೆ ನೂರಾರು ಬೆಂಬಲಿಗರು, ಕಾರ್ಯಕರ್ತರು ಸೇರಿದ್ದರು. ಕಾರ್ಯಕರ್ತರು ಹಾರ, ಶಾಲು ಹಾಕಿ ಎಂಟಿಬಿ ನಾಗರಾಜ್ ಅವರಿಗೆ ಸನ್ಮಾನ ಮಾಡಿದರು. ಸಾರ್ವಜನಿಕರಿಗೆ ಕೆಲಸ ಮಾಡಲು ಒಳ್ಳೆಯ ಖಾತೆ ಸಿಗಲಿ ಎಂದು ಕಾರ್ಯಕರ್ತರು ಶುಭ ಹಾರೈಸಿದರು.
ಮಾಧ್ಯಮಗಳ ಜೊತೆ ಗರುಡಾಚಾರ್ ಪಾಳ್ಯದ ತಮ್ಮ ಕಚೇರಿಯಲ್ಲಿ ಎಂಟಿಬಿ ನಾಗರಾಜ್ ಮಾತನಾಡಿ, ನನಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಪತ್ರಿಕೆಗಳಲ್ಲಿ ಮತ್ತು ಟಿವಿಗಳಲ್ಲಿ ನೋಡ್ತಾ ಇದ್ದೇನೆ.
ನಮ್ಮ ಮೂವರಿಗೂ ಮಂತ್ರಿ ಸ್ಥಾನ ಕೊಡುತ್ತೇವೆ ಅಂತಾ ಸಿಎಂ ಹೇಳಿದ್ದಾರೆ. ಇಲ್ಲಿತನಕ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ, ಸಂಜೆಯೊಳಗಡೆ ಬರಬಹುದು ಎಂದು ನಾನು ಕಾಯುತ್ತಿದ್ದೇನೆ.
ನಿನ್ನೆ ನಮ್ಮ ಮನೆ ದೇವರ ಬೂದಿ ಲಿಂಗೇಶ್ವರ ಸ್ವಾಮಿ ದರ್ಶನಕ್ಕೆ ಕುಟುಂಬ ಸಮೇತ ಹೋಗಿ ಪೂಜೆ ಮಾಡಿಕೊಂಡು ಬಂದಿರುವೆ. ಪ್ರತಿ ವರ್ಷ ಮನೆ ದೇವರ ದರ್ಶನ ಮಾಡುತ್ತಿದ್ವಿ, ಈ ಸಲ ಕೊರೊನಾ ಬಂದಿದ್ದಕ್ಕೆ ತಡವಾಗಿ ಹೋಗಿದ್ವಿ ಎಂದರು.
ಓದಿ...‘ಮೇಸ್ಟ್ರಾದ ಮಿನಿಸ್ಟರ್’ - ಮಕ್ಕಳಿಂದ ಮಗ್ಗಿ ಒಪ್ಪಿಸಿಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್
ಮುಖ್ಯಮಂತ್ರಿಗಳು ನನಗೆ ಯಾವುದೇ ಖಾತೆ ನೀಡಿದರೂ, ನಾನು ನಿಭಾಯಿಸುತ್ತೇನೆ. ನಾನು ಸಾರ್ವಜನಿಕವಾಗಿ ಕೆಲಸ ಮಾಡಲು ಯಾವ ಖಾತೆ ನೀಡಿದ್ರೂ ನಿಭಾಯಿಸುತ್ತೇನೆ. ಜನರ ಮತ್ತು ಕಾರ್ಯಕರ್ತರ ಪಕ್ಷ ಸಂಘಟನೆ ಒಳ್ಳೆಯದಕ್ಕೆ ನಾನು ಕೆಲಸ ಮಾಡುತ್ತೇನೆ. ನಾಳೆ ಪದಗ್ರಹಣಕ್ಕೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಮುಖ್ಯಮಂತ್ರಿಗಳಿಂದ ಇನ್ನೂ ಯಾವುದೇ ಅಧಿಕೃತವಾಗಿ ಮಾಹಿತಿ ಬಂದಿಲ್ಲ ಎಂದರು.